ಭಾನುವಾರ, ಜೂನ್ 26, 2022
21 °C

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು: ತಹಶೀಲ್ದಾರ್‌ ನಡೆಗೆ ಜನರ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ಸರ್ವೆ ನಂಬರ್ 69ರಲ್ಲಿ ಮಂಜೂರು ಮಾಡಿರುವ ಭೂಮಿ ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಕಂದಾಯ ಇಲಾಖೆ ಅಧಿಕಾರಿಗಳು ಇದೇ ಸರ್ವೆ ನಂಬರ್‌ನಲ್ಲಿ ಇರುವ ಬೇರೆ ಭೂಮಿಯನ್ನು ಮಂಜೂರು ಮಾಡಬೇಕು. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಗಮನಕ್ಕೆ ತರಲಾಗುವುದು ಎಂದು ಮುಖಂಡ ಭೈರೇಗೌಡ ತಿಳಿಸಿದರು.

ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರಮಂಗಲ ರಸ್ತೆಯಲ್ಲಿರುವ ಸರ್ವೆ ನಂಬರ್ 69ರಲ್ಲಿ 20 ಗುಂಟೆ ಭೂಮಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯ ವಿಲೇವಾರಿ ಮಾಡುವ ಘಟಕ ಸ್ಥಾಪನೆಗಾಗಿ ಮಂಜೂರು ಮಾಡಲಾಗಿದೆ. ಭೂಮಾಪಕರು ಬಂದು ಅದನ್ನು ಅಳತೆ ಮಾಡಿಕೊಂಡು ಹೋಗಿದ್ದಾರೆ. ಈಗ ಮಂಜೂರು ಮಾಡಿರುವ ಭೂಮಿಯಲ್ಲಿ ಸುಮಾರು 30 ಅಡಿಗೂ ಹೆಚ್ಚು ಹಳ್ಳಗಳಿವೆ. ಗ್ರಾಮ ಪಂಚಾಯಿತಿ ಮೂಲಕ ಈ ಹಳ್ಳವನ್ನು ಮುಚ್ಚಬೇಕಾದರೆ ಸುಮಾರು ₹ 10 ಲಕ್ಷ ಬೇಕಾಗುತ್ತದೆ ಎಂದು ಹೇಳಿದರು.

ಪಂಚಾಯಿತಿಯಲ್ಲಿ ಇಷ್ಟೊಂದು ಹಣದ ಲಭ್ಯತೆ ಇಲ್ಲ. ಯೋಗ್ಯವಾದ ಭೂಮಿಯ ಮಂಜೂರು ಮಾಡುವ ಬದಲಿಗೆ ಕೆಲವರ ಒತ್ತಡಗಳಿಗೆ ಮಣಿದು ಅನನುಕೂಲವಾಗಿರುವ ಭೂಮಿಯನ್ನು ಮಂಜೂರು ಮಾಡಿರುವುದು ವಿಪರ್ಯಾಸ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯಾ ಮಾತನಾಡಿ, ‘ಘನತ್ಯಾಜ್ಯ ವಿಲೇವಾರಿ ಘಟಕ ಮಾಡಲಿಕ್ಕಾಗಿ ನೀಡಿರುವ ಜಾಗದಲ್ಲಿ ನಾವು ಘಟಕ ಸ್ಥಾಪನೆ ಮಾಡಬೇಕಾದರೆ ಸಾಕಷ್ಟು ಅನುದಾನ ಬೇಕಾಗುತ್ತದೆ. ಈ ಕುರಿತು ತಹಶೀಲ್ದಾರ್ ಅವರಿಗೆ ಪತ್ರ ಬರೆದು ಬೇರೆ ಸ್ಥಳ ಗುರುತಿಸಿ ಕೊಡುವಂತೆ ಮನವಿ ಮಾಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು