ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಳಕೆಯ ಮೇಲೆ ಭಾಷೆಯ ಉಳಿವು’

Last Updated 20 ನವೆಂಬರ್ 2019, 17:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಸ್ವಾತಂತ್ರ್ಯ ಹೋರಾಟದ ಜತೆಯಲ್ಲೇ ಆರಂಭವಾದ ಭಾಷಾವಾರು ರಾಜ್ಯ ರಚನೆಯ ಹಿಂದೆ ಹಲವು ಮಹನೀಯರ ಪರಿಶ್ರಮವಿದೆ. ಹಿರಿಯರ ಈ ಪರಿಶ್ರಮ, ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ನಿವೃತ್ತ ಶಿಕ್ಷಕ ಹಾಗೂ ಮೊಬೈಲ್‌ ಮತ್ತು ಕರೆನ್ಸಿ ವ್ಯಾಪಾರಸ್ಥರ ಸಂಘದ ಗೌರವ ಅಧ್ಯಕ್ಷ ವಿ.ಕೃಷ್ಣಪ್ಪ ಹೇಳಿದರು.

ನಗರದಲ್ಲಿ ಬುಧವಾರ ದೊಡ್ಡಬಳ್ಳಾಪುರ ತಾಲ್ಲೂಕು ಮೊಬೈಲ್‌ ಮತ್ತು ಕರೆನ್ಸಿ ವ್ಯಾಪಾರಸ್ಥರ ಸಂಘದ ವತಿಯಿಂದ ನಡೆದ 64ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 8ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿಅವರು ಮಾತನಾಡಿದರು.

‘ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರು ಸಣ್ಣ ಸಣ್ಣ ರಾಜ್ಯಗಳಾಗಿ ಹಂಚಿ ಹೋಗಿದ್ದ ರಾಜ್ಯಗಳನ್ನು ಭಾಷೆ ಆಧಾರದ ಮೇಲೆ ಎಲ್ಲರನ್ನು ಒಂದು ವೇದಿಕೆ, ಒಂದು ಆಡಳಿತದಡಿ ತಂದರು. ರಾಜ್ಯವು ಇಂದು ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಡೀ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಪಂಪ, ರನ್ನರಿಂದ ಮೊದಲುಗೊಂಡು ಹಲವು ಕವಿಗಳ ಕೊಡುಗೆ ಇದೆ’ ಎಂದರು.

‘ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಅನಂತಮೂರ್ತಿ, ಕಾರ್ನಾಡ್‌, ಚಂದ್ರಶೇಖರ ಕಂಬಾರ ಅವರ ತನಕ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಸಂದಿವೆ. ಯಾವುದೇ ವಿಷಯವನ್ನು ಸಮರ್ಥವಾಗಿ ಅಭ್ಯವ್ಯಕ್ತಿಪಡಿಸಬಲ್ಲಷ್ಟು ಶಬ್ಧ ಭಂಡಾರವನ್ನು ಕನ್ನಡ ಭಾಷೆ ಹೊಂದಿದೆ. ಇಂಗ್ಲಿಷ್‌, ಹಿಂದಿ ಭಾಷೆಯ ಪ್ರಭಾವದ ನಡುವೆಯೂ ಕನ್ನಡ ಭಾಷೆ ಗಟ್ಟಿಯಾಗಿ ಬೆಳೆದು ನಿಂತಿದೆ. ಯಾವುದೇ ಭಾಷೆ ಉಳಿಯುವುದು, ಬೆಳೆಯುವುದು ಅಲ್ಲಿನ ಜನರು ಬಳಸುವುದರ ಮೇಲೆ ನಿರ್ಧರಿಸಲ್ಪಡುತ್ತದೆ’ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಮೊಬೈಲ್‌ ಮತ್ತು ಕರೆನ್ಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪಿ.ಜಗದೀಶ್‌ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಯು.ಮಹೇಶ್‌, ಪ್ರಧಾನ ಕಾರ್ಯದರ್ಶಿ ಈ ರಮೇಶ್‌, ಖಜಾಂಚಿ ಬಿ.ಮಂಜುನಾಥ್‌, ಲೋಕೇಶ್‌, ಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT