ಸೋಮವಾರ, ಅಕ್ಟೋಬರ್ 21, 2019
23 °C

ಪ್ಲಾಸ್ಟಿಕ್ ವಸ್ತು ಉತ್ಪಾದನೆ ಸ್ಥಗಿತಕ್ಕೆ ಶಾಸಕ ಒತ್ತಾಯ 

Published:
Updated:
Prajavani

ದೇವನಹಳ್ಳಿ: ರಾಜ್ಯ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯ ಘಟಕಗಳನ್ನು ಸಂಪೂರ್ಣ ನಿಷೇಧ ಜಾರಿ ಮಾಡಿ ತಕ್ಷಣದಿಂದಲೇ ಸ್ಥಗಿತಗೊಳಿಸಲು ಮುಂದಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಒತ್ತಾಯಿಸಿದರು.

ಇಲ್ಲಿನ ಹಳೆ ಬಸ್ ನಿಲ್ದಾಣ ಸಂತೆ ಬೀದಿ ರಸ್ತೆಯಲ್ಲಿ ಪುರಸಭೆ ವತಿಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಬಟ್ಟೆ ಬ್ಯಾಗ್ ಬಳಕೆ ಕುರಿತು ಜನ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಪ್ಲಾಸ್ಟಿಕ್ ದಿನ ಬಳಕೆ ವಸ್ತುಗಳ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸದೆ ಸ್ಥಳೀಯ ಆಡಳಿತ ಇಲಾಖೆಗಳಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವಂತೆ ಒತ್ತಡ ಹೇರುತ್ತಿದೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಯೋಜನೆ ಸಫಲವಾಗುವುದು ಹೇಗೆ, ಪ್ಲಾಸ್ಟಿಕ್ ಉತ್ಪಾದನಾ ಘಟಕಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾದರೆ ಬಟ್ಟೆ ಬ್ಯಾಗ್, ಕೈಚೀಲ, ಕಾಗದದ ತಟ್ಟೆ ಲೋಟಗಳ ಉತ್ಪಾದನೆಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಈಗಾಗಲೇ ದಿನಸಿ ತರಕಾರಿ ಇತರ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯಲು ಬಟ್ಟೆ ಬ್ಯಾಗ್, ಬಟ್ಟೆಯ ಕೈಚೀಲ, ಕಾಗದದಿಂದ ತಯಾರಿಸಿದ ವಸ್ತುಗಳು ಲಭ್ಯವಿದೆ. ಗ್ರಾಹಕರು ಬಳಕೆ ಮಾಡಿಕೊಳ್ಳಬೇಕು. ಮಾರಾಟಗಾರರು ಗ್ರಾಹಕರಿಗೆ ಅದನ್ನೇ ನೀಡಬೇಕು. ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

‘ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಹಾನಿ, ಪರಿಸರಕ್ಕೆ ಧಕ್ಕೆ ಭವಿಷ್ಯದ ಪೀಳಿಗೆಗೆ ಮಾರಕವಾಗಲಿದೆ. ಇನ್ನೊಬ್ಬರ ಒತ್ತಾಯಕ್ಕಾಗಿ ಅಲ್ಲ; ಸ್ವಯಂ ಪ್ರೇರಿತವಾಗಿ ನಾವೇ ಕಡಿವಾಣ ಹಾಕಿಕೊಳ್ಳಬೇಕು. ನಮ್ಮ ಮನೆಯಿಂದಲೇ ಪ್ಲಾಸ್ಟಿಕ್ ಕಡಿವಾಣಕ್ಕೆ ಮುಂದಾಗಿ ಇಲಾಖೆಯೊಂದಿಗೆ ಸಹಕರಿಸಬೇಕು. ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಮರು ಬಳಕೆ ಮಾಡಬಾರದು. ಎಲ್ಲೆಂದರಲ್ಲಿ ಬಿಸಾಡಬಾರದು’ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಪುರಸಭೆ ಸದಸ್ಯರಾದ ರವೀಂದ್ರ, ಬಾಂಬೆ ನಾರಾಯಣಸ್ವಾಮಿ, ನಾಗೇಶ್‌, ಲಕ್ಷ್ಮಿ, ಬಾಲರಾಜ್, ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು ಇದ್ದರು.

Post Comments (+)