ಮಂಗಳವಾರ, ನವೆಂಬರ್ 12, 2019
20 °C

ವಕೀಲರ ಮೇಲೆ ಪೊಲೀಸರ ಹಲ್ಲೆ: ಕಲಾಪ ಸ್ಥಗಿತ

Published:
Updated:
Prajavani

ದೇವನಹಳ್ಳಿ: ದೆಹಲಿಯ ನ್ಯಾಯಾಲಯದ ಆವರಣದಲ್ಲಿ ವಕೀಲರ ಮೇಲೆ ಪೊಲೀಸರು ಗಂಭೀರ ರೀತಿಯ ಹಲ್ಲೆ ನಡೆಸಿದ್ದಾರೆ ಎಂದು ಖಂಡಿಸಿ ತಾಲ್ಲೂಕು ವಕೀಲರು ಸೋಮವಾರ ದಿನದ ಕಲಾಪದಿಂದ ಹೊರಗುಳಿದರು.

ತಾಲ್ಲೂಕು ವಕೀಲ ಸಂಘದ ಅಧ್ಯಕ್ಷ ಆರ್.ಮಾರೇಗೌಡ ಮಾತನಾಡಿ, ಈ ಹಿಂದೆ ನಡೆದ ಅನೇಕ ಕಡೆ ವಕೀಲರ ಮೇಲೆ ಹಲ್ಲೆ, ಎಳೆದಾಟ ನಡೆದಿತ್ತು. ಈಗ ಪೊಲೀಸರಿಂದ ಗೋಲಿಬಾರ್ ಜೊತೆಗೆ ಪೊಲೀಸರು ಗುಂಪು ಹಲ್ಲೆ ನಡೆಸಿ 15ಕ್ಕೂ ಹೆಚ್ಚು ವಕೀಲರಿಗೆ ಗಂಭೀರ ಗಾಯಗಳಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ವಕೀಲರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಪಾರ್ಕಿಂಗ್ ವಿಷಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಗೋಲಿಬಾರ್ ಎಂದರೆ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದರು,

ವಕೀಲರ ಸಂಘ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಂ.ಭೈರೇಗೌಡ, ನಾರಾಯಣಸ್ವಾಮಿ ಮಾತನಾಡಿ, ಪೊಲೀಸರು ಹಲ್ಲೆ ಎಂಬುದು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಪಶು ಪ್ರಾಣಿಗಳಂತೆ ಕೀಳು ಮಟ್ಟದಲ್ಲಿ ಕಾಣುತ್ತಾರೆ. ಬ್ರಿಟಿಷರು ದೇಶದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ತೋರಿಸುತ್ತಿದ್ದ ದರ್ಪ, ದುರಂಹಕಾರದ ನಡೆಯನ್ನು ಬ್ರಿಟಿಷರು ಸ್ಥಳೀಯ ಪೊಲೀಸರಿಗೆ ಬಳುವಳಿಯಾಗಿ ನೀಡಿದಂತಿದೆ ಎಂದು ಆಕ್ಷೇಪಿಸಿದರು.

ಪೊಲೀಸರಿಗೆ ಇನ್ನೂ ಜ್ಞಾನೋದಯವಾಗಿಲ್ಲ. ಠಾಣೆಗೆ ದೂರು ನೀಡಲು ಹೋದಾಗ ಅವರು ಕಾಣುವ ರೀತಿ ವಿಚಿತ್ರವಾದುದು. ಗೌರವವೆಂಬುವುದು ಪೊಲೀಸರಿಗೆ ಗೊತ್ತೇ ಇಲ್ಲ ಎಂಬಂತೆ ಕಾಣುತ್ತದೆ ಎಂದರು.

ಉಗ್ರರನ್ನು, ದರೋಡೆಕೋರರನ್ನು, ಕಳ್ಳ ಮತ್ತು ಸುಲಿಗೆಕೋರರನ್ನು ಬಂಧಿಸುವು ಕಾರ್ಯ ಬಿಟ್ಟು ವಕೀಲರ ಮೇಲೆ ಹಲ್ಲೆ, ಗೋಲಿಬಾರ್ ಎಂದರೆ ನಾಚಿಕೆಯಾಗಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಜಾಗೃತಿ ವಹಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ಜಯರಾಮಯ್ಯ, ಖಜಾಂಚಿ ವೆಂಕಟೇಶ್ ಹಾಗೂ ವಕೀಲರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)