ಮಂಗಳವಾರ, ನವೆಂಬರ್ 12, 2019
28 °C

‘ಕನ್ನಡ ಮಾಧ್ಯಮ ಎಂಬ ಕೀಳರಿಮೆ ಬೇಡ’

Published:
Updated:
Prajavani

ದೊಡ್ಡಬಳ್ಳಾಪುರ: ‘ಗ್ರಾಮೀಣ ಪ್ರದೇಶದವರು ಕನ್ನಡ ಮಾಧ್ಯಮದಲ್ಲಿಯೇ ಓದಿ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಮಾಧ್ಯಮ ಎನ್ನುವ ಕೀಳರಿಮೆ ಬಿಟ್ಟು ವ್ಯಾಸಂಗದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ವಕೀಲ ಎ.ವಿ.ಮುರಳಿ ಹೇಳಿದರು.

ಇಲ್ಲಿನ ಅರಳುಮಲ್ಲಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಎ.ಎನ್‌.ವೆಂಕಟರಾಂ ಅವರ ಸ್ಮರಣಾರ್ಥ ನಗದು ಪುರಸ್ಕಾರ ನೀಡಿ ಅಭಿನಂದಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಉನ್ನತ ಸ್ಥಾನಗಳಲ್ಲಿರುವ, ಸಾಧನೆ ಮಾಡಿರುವ ಬಹುಪಾಲು ಮಹನೀಯರು ಸರ್ಕಾರಿ ಶಾಲೆ, ಗ್ರಾಮೀಣ ಭಾಗದಿಂದಲೇ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಠ್ಯದಾಚೆಗಿನ ಪುಸ್ತಕಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನ ಗಳಿಸಬೇಕು. ಅಂಕ ಗಳಿಕೆ ಎಷ್ಟು ಮುಖ್ಯವೋ ಸಾಮಾನ್ಯ ಜ್ಞಾನವೂ  ಅಷ್ಟೇ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ದಿಪತ್ರಿಕೆಗಳ ಓದು, ಸಾಮಾನ್ಯ ಜ್ಞಾನ ಮುಖ್ಯ’ ಎಂದರು.

ಎಸ್‌ಎಸ್‌ಎಲ್‌ಸಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕೆ.ಶೋಭಿತಾ, ಕೀರ್ತನಾ, ಚಿತ್ರಾವತಿ, ಎಲ್‌.ನವೀನ್‌, ವೈ.ಪಿ ಚೈತ್ರ, ಬಿ.ಎಚ್‌ ಮನೋಜ್‌ ಅವರನ್ನು ಅಭಿನಂದಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ, ಕನ್ನಡ ಶಿಕ್ಷಕರಾದ ಶಿವಶಂಕರ್‌ ಇದ್ದರು.

ಪ್ರತಿಕ್ರಿಯಿಸಿ (+)