ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಷ್ಠರೋಗದ ಜಾಗೃತಿ ಮೂಡಿಸಿ’

ಆರೋಗ್ಯ ಸಹಾಯಕರಿಗೆ ಎರಡು ದಿನಗಳ ಜಿಲ್ಲಾ ಮಟ್ಟದ ಕಾರ್ಯಾಗಾರ
Last Updated 22 ಅಕ್ಟೋಬರ್ 2018, 19:16 IST
ಅಕ್ಷರ ಗಾತ್ರ

ದೇವನಹಳ್ಳಿ: ಮಾನವನ ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ಹಾಗೂ ತಾಮ್ರ ಬಣ್ಣಗಳ ಮಚ್ಚೆಗಳಿದ್ದು ಸ್ವರ್ಶ ಜ್ಞಾನವಿಲ್ಲದಿದ್ದರೆ ಕುಷ್ಠರೋಗ ಎಂದು ಪರಿಗಣಿಸಬೇಕು ಎಂದು ಗ್ರಾಮಾಂತರ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಬಿ.ಎನ್. ಶಾಂತಲಾ ತಿಳಿಸಿದರು.

ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಸಹಾಯಕರಿಗೆ ಎರಡು ದಿನಗಳ ಜಿಲ್ಲಾ ಮಟ್ಟದ ಕುಷ್ಠರೋಗ ನಿರ್ಮೂಲನೆ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕುಷ್ಠರೋಗವು ಮೈಕೊಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ, ಇದು ಅತಿಹೆಚ್ಚು ನರಗಳು, ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹೊಳಪಿನಿಂದ ಕೂಡಿದ ದಪ್ಪನಾದ ಚರ್ಮ ಮತ್ತು ಚರ್ಮದ ಮೇಲೆ ಸಣ್ಣ ಗಂಟುಗಳು ದೇಹದ ಯಾವುದೇ ಭಾಗದಲ್ಲಿ ಕಾಣಬಹುದಾಗಿದೆ ಎಂದರು.

ಕೈಕಾಲು ಮತ್ತು ಕಣ್ಣುಗಳಲ್ಲಿ ಬಲಹೀನತೆ, ಅಂಗಾಲುಗಳಲ್ಲಿ ಹುಣ್ಣು, ಕಣ್ಣುಗಳನ್ನು ಪೂರ್ಣವಾಗಿ ಮುಚ್ಚಲು ಆಗದಿರುವುದು ಇದರ ನೂನ್ಯತೆಗಳು. ಸೂರ್ಯನ ಕಿರಣದಿಂದ ಕೆಲವರಿಗೆ ಬಿಳಿ ಮಚ್ಚೆಗಳಾಗುವ ಸಾಧ್ಯತೆ ಇರುತ್ತದೆ. 2.5 ವರ್ಷರಿಂದ 5 ವರ್ಷದ ಮಕ್ಕಳಿಗೆ ಮತ್ತು ನಂತರದ ವಯಸ್ಸಿನವರಿಗೆ, ಎರಡು ಹಂತದಲ್ಲಿ ವರ್ಗೀಕರಿಸಲಾಗಿದೆ ಎಂದರು.

ನರಗಳ ಆನೇಕ ಭಾಗಗಳಲ್ಲಿ ಹತ್ತಾರು ನರಗಳ ಸಮ್ಮಿಲನವಿರುತ್ತದೆ. ಇಂತಹ ಸಂದರ್ಭದಲ್ಲಿ ಮಚ್ಚೆಗಳಿದ್ದರು ಸ್ವರ್ಶ ಜ್ಞಾನವಿರುತ್ತದೆ. ಯಾವ ನರದಿಂದ ರೋಗದ ಲಕ್ಷಣ ಕಂಡುಬಂದಿದೆ ಎಂಬುದು ಆರೋಗ್ಯಕಾರ್ಯಕರ್ತರಿಗೆ ಗೊಂದಲವಾದರೆ ಹಿರಿಯ ಕುಷ್ಠರೋಗ ತಜ್ಞವೈದ್ಯರಿಗೆ ಶಿಫಾರಸು ಮಾಡಬೇಕು ಎಂದರು.

ಸೂಕ್ತ ಚಿಕಿತ್ಸೆ ಪಡೆಯಲು ವಿಳಂಬವಾದರೆ ನರಗಳ ದೌರ್ಬಲ್ಯ ಹೆಚ್ಚಿ ಸ್ಪರ್ಶಜ್ಞಾನ ಕಳೆದುಕೊಂಡು ಕೈಕಾಲಿನ ಬೆರಳುಗಳು ಇತರೆ ಸೋಂಕಿನೊಂದಿಗೆ ಕೊಳೆಯುತ್ತ ಉದುರುತ್ತದೆ. ಕೀವು ರಕ್ತ ಹೊರಬರುತ್ತಿದ್ದರೂ ರೋಗಿಗೆ ಅರಿವು ಆಗುವುದಿಲ್ಲ. ಸರ್ಕಾರ ಕುಷ್ಠ ರೋಗಿಗಳಿಗೆ ಉದ್ಯೋಗಾವಕಾಶ ಕಲ್ಪಸಿದೆ. ಕುಷ್ಠರೋಗಿಗಳನ್ನೇ ಮುಂದಿಟ್ಟುಕೊಂಡು ಜಾಗೃತಿ ಅಭಿಯಾನ ನಡೆಸಬೇಕು. ಎಲ್ಲ ಮಾರಕ ರೋಗದಂತೆ ಇದು ಸಹ ಒಂದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಕ ಎ.ಎಂ. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ 9,90,923 ಜನಸಂಖ್ಯೆ ಇದೆ. 1,051 ಗ್ರಾಮಗಳಿವೆ. ಒಟ್ಟು ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 35 ಬಹುಸಾಂದ್ರತೆ ಮತ್ತು 05 ಕಡಿಮೆ ಸಾಂದ್ರತೆಯುಳ್ಳ ಕುಷ್ಠ ರೋಗಗಳಿದ್ದಾರೆ. ಕುಷ್ಠರೋಗ ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚುವಲ್ಲಿ ಆರೋಗ್ಯ ಸಹಾಯಕರು ವಿಫಲರಾಗುತ್ತಿದ್ದಾರೆ. ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಒಂದು ಕುಷ್ಠರೋಗಿ ಪತ್ತೆಗೆ ಆಶಾಕಾರ್ಯಕರ್ತೆಯರಿಗೆ ₹250 ಗೌರವಧನ ನೀಡಲಾಗುತ್ತಿದೆ. ನಿಮ್ಮ ಕಾರ್ಯಕ್ಷಮತೆ ಮೇಲೆ ನಿಮ್ಮ ಹುದ್ದೆ ಅವಲಂಬಿತವಾಗಿದೆ ಎಂದರು.

ತಾಲ್ಲೂಕು ಆರೋಗ್ಯಧಿಕಾರಿ ಡಾ.ಪಿ.ಸಂಜಯ್, ಹಿರಿಯ ಆರೋಗ್ಯಾಧಿಕಾರಿ ಸುರೇಂದ್ರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇವಣ್ಣ, ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT