ಪದವಿಗಳು ಸಮಾಜದ ಹಿತಕ್ಕೆ ಬಳಕೆಯಾಗಲಿ: ರಾಣಿ ಸತೀಶ್

7
ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಘಟಿಕೋತ್ಸವ ಸಮಾರಂಭ

ಪದವಿಗಳು ಸಮಾಜದ ಹಿತಕ್ಕೆ ಬಳಕೆಯಾಗಲಿ: ರಾಣಿ ಸತೀಶ್

Published:
Updated:
Deccan Herald

ದೊಡ್ಡಬಳ್ಳಾಪುರ: ನಾಗರಿಕ ಪ್ರಜ್ಞೆಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳುವ ಮೂಲಕ ಸಾಮಾಜಿಕ ಕಟ್ಟುಪಾಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ಪದವೀಧರರು ಹೊಣೆಯಾಧಾರಿತ ಪೌರತ್ವ ಪ್ರತಿಪಾದಿಸಬೇಕು ಎಂದು ಕಾಂಗ್ರೆಸ್‌ ಮುಖಂಡರಾದ ರಾಣಿ ಸತೀಶ್ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಘಟಿಕೋತ್ಸವ-2018 ಪದವಿ ಪ್ರದಾನ ಸಮಾರಂಭದಲ್ಲಿ ಭಾಷಣ ಮಾಡಿದರು.

ಸಮಾಜದ ಹಿತಕ್ಕೆ ಬಳಕೆಯಾಗದ ಪದವಿಗಳು ಅಪ್ರಸ್ತುತ. ಸಮುದಾಯದ ಅಭ್ಯುದಯದ ಜತೆಗೆ ಪರಸ್ಪರ ಸಂಬಂಧ ಗಟ್ಟಿಗೊಳಿಸುವ ಅನಿವಾರ್ಯತೆ ಇದೆ. ಈ ಹಂತದಲ್ಲಿ ಪ್ರಜ್ಞಾಪೂರ್ವಕವಾದ ನಿಲುವು ಮತ್ತು ಸವಾಲು ಸ್ವೀಕರಿಸಿ ಗೆಲ್ಲುವ ಮನೋಭಾವನೆ ಅಗತ್ಯವಾಗಿದೆ ಎಂದರು.

ದೇಶದ ಆಸ್ತಿ ಎಂದು ಪರಿಗಣಿತವಾಗುವ ವಿದ್ಯಾವಂತ ಯುವ ಸಮುದಾಯ ಹೊಣೆಯಾಧಾರಿತ ಕರ್ತವ್ಯ ಮರೆಯಬಾರದು. ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಹೆತ್ತವರ ಬೇಕು-ಬೇಡಗಳಿಗೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.

ಹೃದಯ ಸಂವೇದನೆ ಕನಸು ಮುಖ್ಯ: ಸಶಕ್ತವಾದ ಕನಸುಗಳನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಇದ್ದು, ಕನಸಿಗಿಂತಲೂ ಹೃದಯದ ಮೂಲಕ ಮಾತನಾಡುವ ಕನಸು ಹೊಂದುವುದು ಅಗತ್ಯ. ಎಲ್ಲವನ್ನೂ ಇಂದು ಮಾರುಕಟ್ಟೆ ಆಧಾರದಲ್ಲಿ ನೋಡಲಾಗುತ್ತಿದೆ. ಸಂಬಂಧಗಳು ಮಾರಾಟದ ವಸ್ತುಗಳಾಗಿರುವುದು ದುರಂತ. ಕೃತಕ ಹಾಗೂ ಅಲ್ಪಕಾಲೀನ ಸುಖಗಳತ್ತ ಮನಸ್ಸು ನೀಡಲಾಗುತ್ತಿದೆ. ಸಹಜ ಹಾಗೂ ದೀರ್ಘಕಾಲೀನ ಅನುಭಾವ ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ಉತ್ತಮ ಭವಿಷ್ಯ ನಿರ್ಮಾಣ ಅಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಜೆ.ರಾಜೇಂದ್ರ ಮಾತನಾಡಿ, ಪದವೀಧರರಾಗುತ್ತಿರುವ ವಿದ್ಯಾರ್ಥಿಗಳು ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳನ್ನು ಅರ್ಥಮಾಡಿಕೊಂಡು ಸೃಜನಶೀಲ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಸ್ವತಂತ್ರ ಆಲೋಚನೆಗಳ ಮೂಲಕ ಉದ್ಯೋಗಾವಕಾಶಗಳಿಗೆ ಬೇಕಾದ ಕೌಶಲ ರೂಢಿಸಿಕೊಳ್ಳಬೇಕಾದ್ದು ಅಗತ್ಯ ಎಂದರು.

ಅತಿಥಿಗಳಿಗೆ ಗೌರವ ಧ್ವಜವಂದನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶ್ರೀನಿವಾಸರೆಡ್ಡಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಪಿ.ಚೈತ್ರ ಇದ್ದರು. ಕಾಲೇಜಿನ ವಿದ್ಯಾರ್ಥಿನಿ ನಿತ್ಯಶ್ರೀ ಕೊಳಲಿನಲ್ಲಿ ರಾಷ್ಟ್ರಗೀತೆಯನ್ನು ನುಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !