‘ಸರ್ಕಾರದ ಘೋಷಣೆ ಜಾರಿಗೆ ಬರಲಿ’

7
ದೇವನಹಳ್ಳಿ: ರೈತ ಸಂಘದ ರಾಜ್ಯ ಮಟ್ಟದ ಸಭೆಯಲ್ಲಿ ಆಗ್ರಹ

‘ಸರ್ಕಾರದ ಘೋಷಣೆ ಜಾರಿಗೆ ಬರಲಿ’

Published:
Updated:
Deccan Herald

ದೇವನಹಳ್ಳಿ: ಸರ್ಕಾರದ ಯೋಜನೆಗಳು ಬರೀ ಘೋಷಣೆಯಾಗದೆ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದು ರೈತ ಸಂಘದ (ಪ್ರೊ ನಂಜುಂಡಸ್ವಾಮಿ ಸ್ಥಾಪಿತ) ರಾಜ್ಯ ಘಟಕ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ರಾಜ್ಯಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಆನೇಕ ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ, ಕಬ್ಬು, ಭತ್ತ, ಹತ್ತಿ, ಮೆಣಸಿನಕಾಯಿ, ಆಡಕೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ರೈತರ ಕಬ್ಬಿನ ಬಾಕಿ ಹಣ ತ್ವರಿತವಾಗಿ ‍ಪಾವತಿಸಬೇಕೆಂದು ಮುಖ್ಯಮಂತ್ರಿ ಕರೆದಿದ್ದ ಸಲಹಾ ಸಮಿತಿ ಸಭೆಯಲ್ಲಿ ಮನವರಿಕೆ ಮಾಡಲಾಗಿದೆ ಎಂದರು.

ರಾಜ್ಯದ ಸಾವಿರಾರು ಕೆರೆಗಳಲ್ಲಿರುವ ನೀಲಗಿರಿ, ಜಾಲಿಮರ, ಅಕೇಶಿಯಾ ಗಿಡಗಳನ್ನು ಬುಡಸಮೇತ ಕಿತ್ತು ಕೆರೆ ಅಚ್ಚುಕಟ್ಟು ಮಾಡಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಲು ಒತ್ತಾಯ ಮಾಡಿರುವುದಾಗಿ ತಿಳಿಸಿದರು.

ರೈತರಿಗೆ ಗುಣಮಟ್ಟದ ಬೀಜ ನೀಡುವಲ್ಲಿ ಕೃಷಿ ಇಲಾಖೆ ವಿಫಲವಾಗಿದೆ. ಅಲ್ಲದೆ, ಖಾಸಗಿ ಬಿತ್ತನೆ ಬೀಜ ಪೂರೈಕೆ ಮಾಡುವ ಕಂಪನಿಗಳೊಂದಿಗೆ ಶಾಮೀಲು ಮಾಡಿಕೊಂಡಿದೆ. ಸರ್ಕಾರ ರೈತರಿಗೆ ಬೀಜ ಪೂರೈಕೆ ಮಾಡುವ ಸಂದರ್ಭದಲ್ಲಿ ಎಕರೆಗೆ ಇಂತಿಷ್ಟು ವಿಮೆ ಕಂತು ಕಂಪನಿಗಳಿಂದ ಪಡೆಯಬೇಕು. ವಿಮೆ ಕಂತು ಪಾವತಿಸಲು ಆಗದ ಸ್ಥಿತಿಯಲ್ಲಿ ರೈತರಿದ್ದಾರೆ ಎಂಬುದನ್ನು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಮನೆ ಬಾಗಿಲಿಗೆ ಸರ್ಕಾರ ಎಂದು ಘೋಷಣೆ ಮಾಡಿದ್ದಾರೆ. ರೈತರ ಸಂಕಷ್ಟಕ್ಕೆ ಪರಿಹಾರ ನೀಡದೆ ಮನೆ ಬಾಗಿಲಿಗೆ ಹೋಗಿ ಏನು ಮಾಡುತ್ತಾರೆ  ಎಂದು ಕೇಳಿದರು.

ರೈತ ಸಂಘದ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ತಾಲ್ಲೂಕಿನ 24 ದೊಡ್ಡ ಕೆರೆಗಳಿವೆ. ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು. ರಾಜ್ಯ ಸಾರಿಗೆ ಮತ್ತು ಮಹಾನಗರ ಸಾರಿಗೆ ಬಸ್‌ಗಳ ಸಂಚಾರ ಕಡಿಮೆಯಾಗುತ್ತಿದೆ. ಟೋಲ್ ಸುಂಕ ಹೆಚ್ಚಳದಿಂದ ಟ್ರಿಪ್‌ಗೆ ಹೆಚ್ಚುವರಿ ₹6 ವಸೂಲಿ ಮಾಡಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.

ಬಾಗೇಪಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂ.ಎಸ್ ಚಲಪತಿ ಮಾತನಾಡಿ, 50 ವರ್ಷದಿಂದ ಸೀಮೆ ಜಾಲಿಗಿಡಗಳು ಎಲ್ಲೆಡೆ ಹರಡಿಕೊಂಡಿವೆ. ಇದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಇದು ರೈತರ ಬೆಳೆಗಳಿಗೆ ಮಾರಕವಾಗುತ್ತಿದೆ. ಸರ್ಕಾರ ನರೇಗಾ ಮಾದರಿಯಲ್ಲಿ ಅನುದಾನ ಬಿಡುಗಡೆ ಮಾಡಿ ಜಾಲಿ ಮುಕ್ತವನ್ನಾಗಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಘಟಕ ಪದಾಧಿಕಾರಿಗಳಾದ ಮಾಧವರೆಡ್ಡಿ, ನಾಗನಗೌಡ, ದೇಸಾಯಿ, ಮೌಲಾಸಾಬ್, ಮುನಿಶ್ಯಾಮಪ್ಪ, ಜಯಶಂಕರ್, ಜಿ.ರವಿ,ನಾಗೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !