ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಬದಲಾಗಲಿ

ಬಿ.ಎಸ್.ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಒತ್ತಾಯ
Last Updated 18 ಜನವರಿ 2021, 1:46 IST
ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಆರ್.ಅಶೋಕ್ ಅವರನ್ನು ಕೂಡಲೇ ಸರ್ಕಾರ ಬದಲಾಯಿಸಬೇಕು ಎಂದು ಬಿ.ಎಸ್.ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.

ಇಲ್ಲಿನ ಬೈಚಾಪುರ ರಸ್ತೆ ಬಳಿ ಇರುವ ಬಿ.ಎಸ್.ಪಿ ಜಿಲ್ಲಾ ಕಚೆರಿಯಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಭೂಗಳ್ಳರಿಗೆ ಮತ್ತು ಬಂಡವಾಳ ಶಾಹಿಗಳಿಗೆ ಬೆಂಬಲ ನೀಡುತ್ತಿದ್ದು ತಮ್ಮ ಹಿಂಬಾಲಕರಿಂದ ಭೂಕಬಳಿಕೆ ಮತ್ತು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆ.ಗೊಲ್ಲಹಳ್ಳಿ ಗ್ರಾಮದ ಮುನಿಯಪ್ಪ ಎಂಬುವರಿಗೆ ಸೇರಿದ ₹10 ಕೋಟಿ ಮೌಲ್ಯದ ಜಮೀನು ಕಬಳಿಸುವ ಯತ್ನದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 5 ತಿಂಗಳು ಕಳೆದರೂ ಆರೋಪಿಯಾಗಿರುವ ರಂಗಸ್ವಾಮಿಯನ್ನು ದಸ್ತಗಿರಿ ಮಾಡಿಲ್ಲ. ಉಸ್ತುವಾರಿ ಸಚಿವರ ಬೆಂಬಲದಿಂದಾಗಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅವರು ದೂರಿದರು.

ಸುಪ್ರಿಂಕೋರ್ಟ್‌ ಈಚೆಗೆ ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿರುದ್ಧ ತೀರ್ಪು ನೀಡಿದೆ. ಆ ತೀರ್ಪಿನಂತೆ ಜಮೀನು ಮಾರಾಟ ಮಾಡಿದ 25 ವರ್ಷದೊಳಗೆ ಕೇಸು ದಾಖಲಿಸಬೇಕು. ಇಲ್ಲದಿದ್ದರೆ ಆ ಜಮೀನು ಮಾರಿದವರಿಗೆ ಹಕ್ಕಿರುವುದಿಲ್ಲ ಎಂದು ತಿಳಿಸಿದೆ. ಈ ತೀರ್ಪಿನಿಂದ ಲಕ್ಷಾಂತರ ಪರಿಶಿಷ್ಟ ಸಮುದಾಯದವರಿಗೆ ತೊಂದರೆಯಾಗಲಿದೆ. ಸರ್ಕಾರ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ವಾರ್ಷಿಕ 60ಲಕ್ಷ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕಾಗಿತ್ತು. ಕಳೆದ ಒಂದು ವರ್ಷದಿಂದ ಸ್ಥಗಿತಗೊಳಿಸಿದೆ. ಇದು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ನ್ಯಾ.ನಾಗಮೋಹನ್ ದಾಸ್ ವರದಿಯನ್ವಯ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗೆ ತಿದ್ದುಪಡಿ ಮಾಡಿರುವುದನ್ನು ರದ್ದುಪಡಿಸಬೇಕು. ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ವ್ಯಾಪ್ತಿ ಬಿ.ಎಸ್.ಪಿ ವತಿಯಿಂದ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.

ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್, ಜಿಲ್ಲಾ ಸಂಯೋಜಕ ನರಸಿಂಹಯ್ಯ, ಜಿಲ್ಲಾ ಅಧ್ಯಕ್ಷ ಮುನಿಕೃಷ್ಣ, ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಮಹಿಳಾ ಘಟಕ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸಂಚಾಲಕಿ ರಮಾದೇವಿ, ತಾಲ್ಲೂಕು ಅಧ್ಯಕ್ಷ ಬಂಗಾರಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಪಿ.ಮಂಜುನಾಥ್, ಮಹಿಳಾ ಘಟಕ ಅಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಶ್ರೀದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT