ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳ್ಳಿಗೂ ಸಾಹಿತ್ಯದ ಕಂಪು ಪಸರಿಸಲಿ’

ಕಸಾಪ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
Last Updated 22 ಜುಲೈ 2021, 4:16 IST
ಅಕ್ಷರ ಗಾತ್ರ

ವಿಜಯಪುರ: ‘ಕನ್ನಡ ಸಾಹಿತ್ಯವನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ಯುವ ಮೂಲಕ ಗ್ರಾಮೀಣ ಭಾಗದಲ್ಲಿ ಕನ್ನಡದ ಕಹಳೆ ಮೊಳಗಿಸುವ ಕೆಲಸವನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಿ.ಮಾ. ಸುಧಾಕರ್ ಹೇಳಿದರು.

ಪಟ್ಟಣದ ಮಹಂತಿನ ಮಠದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡೂ ಒಟ್ಟಿಗೆ ಕೆಲಸ ಮಾಡಿದಾಗ ಮಾತ್ರ ಸಾಹಿತ್ಯದ ಅಭಿವೃದ್ಧಿಯಾಗುತ್ತದೆ. ಕನ್ನಡ ಭಾಷೆಗೆ ಬಹುದೊಡ್ಡ ಪರಂಪರೆಯಿದೆ. ಇಂತಹ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಸಲಹೆ ನೀಡಿದರು.

ಸಾಹಿತ್ಯ ಮತ್ತು ಧರ್ಮ ಜೊತೆ ಜೊತೆಯಲ್ಲಿಯೇ ಕೆಲಸ ಮಾಡಬೇಕು. ಪತ್ರಿಕೆಗಳು, ದೃಶ್ಯ ಮಾಧ್ಯಮ ಹಾಗೂ ಸಾಹಿತಿಗಳು, ಲೇಖಕರು ಒಳ್ಳೆಯ ಭಾಷೆ ಬಳಕೆ ಮಾಡಬೇಕು. ಸಮಾಜದ ಆರೋಗ್ಯ ಹಾಳು ಮಾಡುವಂತಹ ಪದಬಳಕೆ ಮಾಡಬಾರದು. ಭಾಷೆಯ ಮೂಲವಾದ ಜನಪದ ಕಲೆ, ಸಾಹಿತ್ಯವನ್ನು ಉಳಿಸಿ ಮುಂದಿನ ಪೀಳಿಗೆಗೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ನೆಲ, ಜಲದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಮಾತನಾಡಿ, ಭಾಷೆ ಎಂಬುದು ಒಂದು ದಿನದ ಬೆಳೆಯಲ್ಲ. ಅದು ಒಂದು ನಾಡಿನ ಅಂತಃ ಸತ್ವಗಳಾದ ನಡೆ-ನುಡಿ, ಪರಂಪರೆಗಳನ್ನೊಳಗೊಂಡ ಸಮಸ್ತ ಸಂಸ್ಕೃತಿಯನ್ನು ಸಹಸ್ರಾರು ವರ್ಷಗಳಿಂದ ಹೀರಿಕೊಂಡು ಬೆಳೆದು ನಿಂತಿರುವ ಮಹಾವೃಕ್ಷ ಎಂದು ಬಣ್ಣಿಸಿದರು.

ಭಾಷೆ ಅಂದರೆ ಸಂಸ್ಕೃತಿ. ಇದು ಸಂಸ್ಕೃತಿಯ ವಾಹಕ. ಸಂಸ್ಕೃತಿಯ ದಾಖಲೆ. ಸಾಂಸ್ಕೃತಿಕ ಚರಿತ್ರೆಯನ್ನು ಭವಿಷ್ಯದ ಜೊತೆ ಬೆಸೆಯುವ ಸಾಧನ. ಈ ಹಿನ್ನೆಲೆಯಲ್ಲಿ ಕನ್ನಡ ಒಂದೊಂದು ಪದವನ್ನು ಕಳೆದುಕೊಂಡರೂ ಕನ್ನಡ ಸಂಸ್ಕೃತಿ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಸಾಹಿತ್ಯ ನಿಂತ ನೀರಾಗಬಾರದು. ಅದು ಹರಿಯುವಂತಹ ನದಿಯಾಗಬೇಕು. ಹಳ್ಳಿಗಳಿಗೆ ಸಾಹಿತ್ಯವನ್ನು ಕೊಂಡೊಯ್ದಾಗ ಹಳ್ಳಿಗಳಲ್ಲಿರುವ ಸಾಹಿತ್ಯ ಪ್ರೇಮಿಗಳಿಗೆ ಪ್ರೇರಣೆ ನೀಡಲು ಸಹಕಾರಿಯಾಗುತ್ತದೆ. ಇಂದು ಸಾಹಿತ್ಯ ಕ್ಷೇತ್ರ ಬೃಹದಾಕಾರವಾದ ಹೆಮ್ಮರವಾಗಿ ಬೆಳೆದಿದೆ. ಯುವಕರಿಗೆ ಪ್ರೇರಣೆ ನೀಡುವಂತಹ ಕಾರ್ಯಗಳಾಗಬೇಕು. ಸಮ್ಮೇಳನಗಳ ಮೂಲಕ ಸಾಹಿತ್ಯ ಪ್ರಿಯರನ್ನು ಆಕರ್ಷಿಸುವಂತಹ ಕೆಲಸವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ವಿಶ್ವನಾಥ್, ಕೆ.ಎಚ್. ಚಂದ್ರಶೇಖರ್, ಎಂ.ವಿ. ನಾಯ್ಡು, ನಾಗಯ್ಯ, ಬಿರಾದಾರ, ಮುನಿರಾಜು ಇದ್ದರು.

ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಬಲಮುರಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಐ.ಟಿ. ರಾಮಾಂಜಿನಪ್ಪ, ಬೂದಿಗೆರೆ ಪ್ರಭಾಕರ್, ವೈ.ಡಿ. ದಿನೇಶ್, ಚಂದ್ರೇಗೌಡ, ಜೆ.ಎನ್. ರಾಮಾಂಜಿನಪ್ಪ, ಗೌರವ ಕಾರ್ಯದರ್ಶಿಗಳಾಗಿ ಎ.ಬಿ. ಪರಮೇಶಯ್ಯ, ಮುನಿವೆಂಕಟರವಣಪ್ಪ, ಕೋಶಾಧ್ಯಕ್ಷರಾಗಿ ರಾಜಶೇಖರಾಚಾರಿ ಬಿ.ಎಸ್., ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ನರಸಿಂಹಮೂರ್ತಿ, ಗಣೇಶ್, ಮಹಿಳಾ ಪ್ರತಿನಿಧಿಗಳಾಗಿ ಗಿರಿಜಾಂಬ, ರಾಧರೆಡ್ಡಿ, ಸಂಘ, ಸಂಸ್ಥೆಯ ಪ್ರತಿನಿಧಿಗಳಾಗಿ ವೆಂಕಟೇಶ್ ವಿ., ತಾಲ್ಲೂಕು ಶಿಕ್ಷಣಾಧಿಕಾರಿಯಾಗಿ ಅಶ್ವಥನಾರಾಯಣ ಅಧಿಕಾರ ಸ್ವೀಕರಿಸಿದರು.

ಹೋಬಳಿ ಅಧ್ಯಕ್ಷರು: ವಿಜಯಪುರ– ಸುಭ್ರಮಣಿ, ಚನ್ನರಾಯಪಟ್ಟಣ– ತ್ಯಾಗರಾಜು ವೈ.ಸಿ., ಕುಂದಾಣ– ನರಸಿಂಹರಾಜು, ಕಸಬಾ– ಅಶ್ವಿನಿ ಮುನಿರಾಜು, ದೇವನಹಳ್ಳಿ ಟೌನ್– ಪುಟ್ಟಸ್ವಾಮಿ ಹಾಗೂ ವಿಜಯಪುರ ಟೌನ್– ಮುನಿವೀರಣ್ಣ ಅಧಿಕಾರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT