‘ಮಕ್ಕಳ ಮನೋವಿಕಾಸಕ್ಕೆ ಪುಸ್ತಕ ಓದು ಅಗತ್ಯ’

7
ಕನ್ಸುಲೇಟ್‌ ಜನರಲ್‌ ಆಫ್‌ ಜರ್ಮನಿ ಹಾಗೂ ರಾಯಲ್ ಹೆರಿಟೇಜ್ ಗ್ರೀನ್ ಮಿಷನ್‌ನಿಂದ ಗ್ರಂಥಾಲಯಕ್ಕೆ ನೆರವು

‘ಮಕ್ಕಳ ಮನೋವಿಕಾಸಕ್ಕೆ ಪುಸ್ತಕ ಓದು ಅಗತ್ಯ’

Published:
Updated:
Deccan Herald

ವಿಜಯಪುರ: ‘ಪುಸ್ತಕ ಓದುವುದು ಹಾಗೂ ವೈಜ್ಞಾನಿಕ ಪ್ರಯೋಗಗಳ ಮೂಲಕ ಮಕ್ಕಳ ಮನೋವಿಕಾಸ ಆಗಬೇಕು ಎಂಬುದು ನಮ್ಮ ಆಶಯ’ ಎಂದು ಕನ್ಸುಲ್ ಜನರಲ್ ಆಫ್ ಜರ್ಮನಿ, ಮಾರ್ಗಿಟ್ ಹೆಲ್‌ವಿಗ್ ಬೊಟ್ಟೆ ಹೇಳಿದರು.

ಸಮೀಪದ ಭಕ್ತರಹಳ್ಳಿ ಬಿ.ಎಂ.ವಿ. ಎಜುಕೇಷನ್ ಟ್ರಸ್ಟ್‌ನ ಶಾಲಾ ಆವರಣದಲ್ಲಿ ಬುಧವಾರ ಬರೋಡದ ರಾಜಮನೆತನದ ರಾಯಲ್ ಹೆರಿಟೇಜ್ ಗ್ರೀನ್ ಮಿಷನ್ ಹಾಗೂ ಕನ್ಸುಲೇಟ್‌ ಜನರಲ್‌ ಆಫ್‌ ಜರ್ಮನಿ ಅವರ ಆರ್ಥಿಕ ನೆರವಿನಿಂದ ನಿರ್ಮಾಣವಾಗಿರುವ ಗ್ರಂಥಾಲಯ ಮತ್ತು ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ವಿದ್ಯಾಭ್ಯಾಸ ಮತ್ತು ಜೀವನಾದರ್ಶಗಳನ್ನು ಗ್ರಾಮೀಣ ಮಕ್ಕಳಿಗೆ ಕಲಿಸುವ ಈ ಶಾಲೆಯ ಮಕ್ಕಳ ಶಿಸ್ತನ್ನು ಕಂಡು ಖುಷಿಯಾಯಿತು. ತೋಟಗಾರಿಕಾ ತಜ್ಞ ಜರ್ಮನ್‌ನ ಕೃಂಬೀಗಲ್‌ ಇಲ್ಲಿನ ಸುಂದರ ಕಂಬಗಳನ್ನು ನಿರ್ಮಿಸಿರುವುದು ತಿಳಿಯಿತು. ಗ್ರಂಥಾಲಯ ಮತ್ತು ಪ್ರಯೋಗಾಲಯದ ಮೂಲಕ ಈ ನಂಟನ್ನು ಮುಂದುವರೆಸಿದ್ದೇವೆ ಎಂದರು.

ಕೆಲಸಕ್ಕಾಗಿ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವವರು ತಾವು ಓದಿದ ಶಾಲೆಗೆ ನೆರವು ನೀಡುತ್ತಿರುವುದನ್ನು ಕಂಡು ಸಂತಸವಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಆದರೂ ಪುಸ್ತಕ ಓದಿಗೆ ಸರಿಸಾಟಿಯಿಲ್ಲ. ಗ್ರಂಥಾಲಯ ಮತ್ತು ವಿಜ್ಞಾನದ ಪ್ರಯೋಗಾಲಯಗಳ ಸದ್ಬಳಕೆಯಾಗಲಿ ಎಂದರು.

ಶಾಸಕ ವಿ. ಮುನಿಯಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ. ಬಿ.ಎಂ.ವಿ. ಶಾಲೆಯನ್ನು ಹಿರಿಯರು ಸಾಮಾಜಿಕ ಕಳಕಳಿಯಿಂದ ಪ್ರಾರಂಭಿಸಿ
ದ್ದನ್ನು ಅವರ ಮುಂದಿನ ತಲೆಮಾರು ಅದೇ ಬದ್ಧತೆಯಿಂದ ಬೆಳೆಸುತ್ತಿದ್ದಾರೆ. ವಿದ್ಯಾಸಂಸ್ಥೆಯಲ್ಲಿನ ಗ್ರಂಥಾಲಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೊಸ ಪ್ರಯೋಗಗಳನ್ನು ಮಾಡುವಲ್ಲಿ ಹೆಚ್ಚು ಆಸಕ್ತರಾಗಬೇಕು. ಮಕ್ಕಳಲ್ಲಿ ಪ್ರತಿಭೆಗಳಿವೆ. ಅವುಗಳನ್ನು ಹೊರಗೆಳೆಯುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂದರು.

ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ನೀಡಲು ಸಹಾಯಧನ ಹಾಗೂ ಬರೋಡ ಸಂಸ್ಥಾನದ ಕುರಿತ ಪುಸ್ತಕವನ್ನು ಅವರು ನೀಡಿದರು. ಬರೋಡದ ರಾಜಮನೆತನದ ಜೀತೇಂದ್ರ ಸಿಂಗ್ ಜಿ ಗಾಯಕ್‌ವಾಡ್ ರವಿವರ್ಮ ಚಿತ್ರಿಸಿರುವ ಜಯಚಾಮರಾಜೇಂದ್ರ ಮಹಾರಾಜರ ಮತ್ತು ಸಯ್ಯಾಜಿರಾವ್‌ ಗಾಯಕವಾಡ್‌ ಮಹಾರಾಜರ ಚಿತ್ರವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಗಣ್ಯರೆಲ್ಲರೂ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಅನಾವರಣ ಗೊಳಿಸಲಾಯಿತು. ನಾರಾಯಣ ಮಾನೆ ಅವರು ಶಾಲೆಗೆ ಹತ್ತು ಕಂಪ್ಯೂಟರ್‌ಗಳನ್ನು ನೀಡಿದರು. ಶಾಲೆಯ ವಿದ್ಯಾರ್ಥಿಗಳ ರೋಟರ‍್ಯಾಕ್ಟ್‌ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಬಿ.ಎಂ.ವಿ. ಸಂಸ್ಥೆಯ ಅಧ್ಯಕ್ಷ ಬಿ.ವಿ. ಮುನೇಗೌಡ, ಕಾರ್ಯದರ್ಶಿ ಎಲ್‌. ಕಾಳಪ್ಪ, ರಾಣೀ ಸಾಹೇಬ್ ದುರ್ಗಾರಾಜೇ ಗಾಯಕ್ ವಾಡ್, ರೋಟರಿ ಬೆಂಗಳೂರು ಸೆಂಟೀನಿಯಲ್ ಅಧ್ಯಕ್ಷೆ ನಂದಿನಿ ಜಗನ್ನಾಥ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಪಿ.ಮೋಹನ್, ಸ್ಟೈಲ್ ಫೌಂಡೇಷನ್‌ನ ಸಿ.ಎಂ.ಮುನೇಗೌಡ, ಬಿ.ಎಂ.ವಿ.ಸಂಸ್ಥೆಯ ಟ್ರಸ್ಟಿಗಳಾದ ಎಸ್‌.ನಾರಾಯಣಸ್ವಾಮಿ, ವೆಂಕಟಮೂರ್ತಿ, ಪುಟ್ಟಮೂರ್ತಿ, ನಂಜುಡಾರಾಧ್ಯ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೈರೇಗೌಡ, ಸತೀಶ್‌ ಮೋಕ್ಷಗುಂಡಂ, ಡಾ.ಹಿತ್ತಲಮನಿ, ಜಯರಾಮೇಗೌಡ, ನಾರಾಯಣ ಮಾನೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !