ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.30 ಕೋಟಿ ಸಾಲ ವಿತರಣೆ

ಡಿಸಿಸಿ ಬ್ಯಾಂಕ್‌ ಸಾಲ ಮರುಪಾವತಿ ತೃಪ್ತಿಕರ: ಕೆ.ಆರ್‌. ರಮೇಶ್‌ ಕುಮಾರ್
Last Updated 23 ಅಕ್ಟೋಬರ್ 2020, 2:41 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಡಿಸಿಸಿ ಬ್ಯಾಂಕ್‌ ನೀಡಿರುವ ಸಾಲದ ಮರುಪಾವತಿ ತೃಪ್ತಿಕರವಾಗಿದ್ದು, ಬಡ್ಡಿರಹಿತ ಸಾಲದ ಮೊತ್ತವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಶಾಸಕ ಕೆ.ಆರ್. ರಮೇಶ್‌ ಕುಮಾರ್ ಹೇಳಿದರು.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಗುರುವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ಜಾತಿ, ಮತ ಹಾಗೂ ಪಕ್ಷಭೇದವಿಲ್ಲದೆ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿಯವರೆಗೆ 40 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಸಾಲ ಪಡೆದುಕೊಂಡಿದ್ದಾರೆ. ಇನ್ನೂ 20 ಸಾವಿರ ಮಂದಿಗೆ ಸಾಲ ನೀಡಲಾಗುವುದು. ಸಾಲದ ಹಣವನ್ನು ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಈ ಬಾರಿ ಉತ್ತಮ ಮಳೆಯಾಗಿದೆ. ಇನ್ನೊಂದು ವರ್ಷದಲ್ಲಿ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಕೆಸಿ ವ್ಯಾಲಿ ನೀರು ಹರಿಸಲಾಗುವುದು. ಆಗ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಅಂತರ್ಜಲಮಟ್ಟ ಹೆಚ್ಚಲಿದ್ದು ಕೊಳವೆಬಾವಿಗಳಲ್ಲಿ ನೀರು ಸಿಗುತ್ತದೆ. ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಜೀವನ ನಡೆಸಲು ಕಷ್ಟವಾಗುವುದಿಲ್ಲ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿರಹಿತ ಸಾಲ ಪಡೆದಿರುವ ಫಲಾನುಭವಿಗಳು, ಬಡ್ಡಿ ಹಣವನ್ನು ಕಟ್ಟಿ ಸರ್ಕಾರದಿಂದ ಮರುಪಾವತಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಇದು ಬಡ ಫಲಾನುಭವಿಗಳಿಗೆ ಸಾಧ್ಯವಾಗದ ಸಂಗತಿಯಾಗಿದೆ. ಆದ್ದರಿಂದ ಈ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸಲಾಗುವುದು. ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಿದ್ದು, ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದನ್ನು ತಡೆಯಬೇಕು. ಇಲ್ಲವಾದರೆ ಸ್ತ್ರೀಶಕ್ತಿ ಸಂಘದ ಸದಸ್ಯರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್‌ ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ ಮಾದರಿಯನ್ನು ಅಳವಡಿಸಿಕೊಂಡಿದೆ. ಆದ್ದರಿಂದ ಫಲಾನುಭವಿಗಳು ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಠೇವಣಿ ಇಡಬೇಕು. ಗ್ರಾಹಕರಿಗೆ ಎಟಿಎಂ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಶಾಸಕ ರಮೇಶ್‌ ಕುಮಾರ್‌ ಅವರ ಆಶಯದಂತೆ ಸಾಲ ವಿತರಣೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುವುದು. ರೈತರು ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ 48 ಸ್ತ್ರೀಶಕ್ತಿ ಸಂಘಗಳಿಗೆ ₹ 2.30 ಕೋಟಿ ಸಾಲ ವಿತರಣೆ ಮಾಡಲಾಯಿತು. ಮುಖಂಡರಾದ ದಿಂಬಾಲ ಅಶೋಕ್‌, ಅಕ್ಬರ್‌ ಷರೀಫ್‌, ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ಬಿ.ಜಿ. ಸೈಯದ್‌ ಖಾದರ್‌, ಸರ್ದಾರ್‌, ನಾರಾಯಣಸ್ವಾಮಿ, ಲಕ್ಷ್ಮಣ ರೆಡ್ಡಿ, ಶ್ರೀರಾಮ ರೆಡ್ಡಿ, ಗುರಪ್ಪ, ನಂಜುಂಡಪ್ಪ, ಸರಸ್ವತಮ್ಮ, ಶಿವಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT