ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಲಿ

ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ
Last Updated 1 ನವೆಂಬರ್ 2019, 16:09 IST
ಅಕ್ಷರ ಗಾತ್ರ

ಆನೇಕಲ್ : ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯುವಂತಾಗಬೇಕು. ಕನ್ನಡ ಭಾಷೆಗೆ ಎಲ್ಲೆಡೆ ಅಗ್ರಸ್ಥಾನ ದೊರೆಯುವಂತೆ ಮಾಡುವ ಮೂಲಕ ಹಿರಿಯರ ಹೋರಾಟದ ಫಲವಾಗಿ ದೊರೆತ ಅಖಂಡ ಕರ್ನಾಟಕಕ್ಕೆ ಗೌರವ ತರಬೇಕು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಅವರು ಪಟ್ಟಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸರೋಜಿನಿ ಮಹಿಷಿ ವರದಿ ಸೇರಿದಂತೆ ಹಲವು ಆಯೋಗಗಳು ಸ್ಥಳೀಯರಿಗೆ ಉದ್ಯೋಗ ನೀಡಲು ಶಿಫಾರಸ್ಸು ಮಾಡಿವೆ. ನಮ್ಮ ನೆಲದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದ ಉದ್ಯಮಿಗಳು ಇಲ್ಲಿಯ ನೀರು, ನೆಲ ಬಳಸುತ್ತಾರೆ. ಆದರೆ ಉದ್ಯೋಗ ನೀಡಲು ಮಾತ್ರ ಮೀನಾಮೇಷ ಎಣಿಸುತ್ತಾರೆ. ಆನೇಕಲ್‌ ತಾಲ್ಲೂಕಿನಲ್ಲಿ ಐದು ಕೈಗಾರಿಕ ಪ್ರದೇಶಗಳಿವೆ. ಇಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಬೇಕು ಎಂದರು.

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಬೇಕು. ಪ್ರತಿದಿನ ಕನ್ನಡ ಪತ್ರಿಕೆ, ಕನ್ನಡದ ಪುಸ್ತಕಗಳನ್ನು ಹಾಗೂ ಕನ್ನಡದ ಖ್ಯಾತ ಕವಿಗಳ ಮೇರು ಕೃತಿಗಳನ್ನು ಓದುವ ಹವ್ಯಾಸವನ್ನು ರೂಢಿಸಬೇಕು. ಇದರಿಂದ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ವಿಸ್ತಾರವಾದ ತಿಳಿ‌ವಳಿಕೆ ಉಂಟಾಗುತ್ತದೆ ಎಂದು ತಿಳಿಸಿದರು.

ತಹಶೀಲ್ದಾರ್ ದಿನೇಶ್‌ ಮಾತನಾಡಿ ಸಹಸ್ರಾರು ಮಂದಿ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸ್ಥಾಪನೆಯಾಯಿತು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಈ ನೆಲದ ಭಾಷೆಯು ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದಿರುವುದು ಹೆಗ್ಗಳಿಕೆಯಾಗಿದೆ. ಆನೇಕಲ್‌ ಗಡಿ ಭಾಗದಲ್ಲಿದ್ದರೂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದೆ. ಇಲ್ಲಿಯ ಕರಗ, ಜಾತ್ರೆಗಳು ಈ ನೆಲಮೂಲದ ಸೊಗಡನ್ನು ಬಿಂಬಿಸುತ್ತವೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಸಂಪತ್‌ ಮಾತನಾಡಿ, ‘ಪ್ರಾಚೀನ ಇತಿಹಾಸವುಳ್ಳ ಸಾಹಿತ್ಯ, ಸಂಸ್ಕೃತಿ, ಜಾನಪದ ಸೊಗಡಿನ ಕನ್ನಡ ನೆಲ ತನ್ನದೇ ಆದ ಸಾಧನೆಯ ಮೂಲಕ ದೇಶದಲ್ಲಿ ಹೆಗ್ಗುರುತು ಮೂಡಿಸಿದೆ. ಕರ್ನಾಟಕವು ಸಂಗೀತ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದೆ. ಅವರ ಆದರ್ಶಗಳು ಉಳಿಯುವಂತೆ ಮಾಡಲು ನಾವೆಲ್ಲರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು’ ಎಂದರು.

ಧ್ವಜಾರೋಹಣ ನೆರವೇರಿಸಿದ ನಂತರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿವಿಧ ಜನಪದ ಕಲಾತಂಡಗಳೊಂದಿಗೆ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಪೂಜಾ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆ ಮೆರುಗು ನೀಡಿದವು.

ಆನಂದ್ ಮತ್ತು ವಾಸು ತಂಡದವರು ಕನ್ನಡ ಗೀತೆಗಳನ್ನು ಸಂಚಾರಿ ವಾಹನದಲ್ಲಿ ಹಾಡುತ್ತಾ ಸಾಗಿದರು. ವಿಧಾತ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಡೊಳ್ಳುಕುಣಿತ, ಸೋಮನ ಕುಣಿತದ ವೇಷದಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರಕಲಾ.ಟಿ.ವಿ.ಬಾಬು, ಕಾರ್ಯನಿರ್ವಹಣಾಧಿಕಾರಿ ದೇವರಾಜೇಗೌಡ, ಸದಸ್ಯ ಪುಷ್ಪರಾಜು, ಪುರಸಭಾ ಸದಸ್ಯರಾದ ಎನ್‌.ಎಸ್‌.ಪದ್ಮನಾಭ್‌, ಪವಿತ್ರಾ ರಘು, ಕೃಷ್ಣ, ಶ್ರೀಕಾಂತ್‌, ಕೆ.ಶ್ರೀನಿವಾಸ್, ರಾಜಪ್ಪ, ಮಂಜುಳ ನೀಲಕಂಠಯ್ಯ, ಕಂಠೀರವ ನೃತ್ಯ ಸಂಗೀತ ಮಹಾಸಭಾ ಅಧ್ಯಕ್ಷ ಪಿ.ಧನಂಜಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನಪ್ರಕಾಶ್‌, ಆನೇಕಲ್ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ನಂಜೇಗೌಡ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ ಲಂಬಾಣಿ, ಸಬ್‌ ಇನ್‌ಸ್ಪೆಕ್ಟರ್‌ ಮುರಳೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT