ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿನ ಶಸ್ತ್ರ ಚಿಕಿತ್ಸೆಗೂ ಲಾಕ್‌ಡೌನ್‌   

Last Updated 1 ಮೇ 2020, 9:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಇಡೀ ವಿಶ್ವದ ಜನರ ದಿನ ನಿತ್ಯದ ಬದುಕನ್ನು ಕೊರೊನಾ ಮೂರು ತಿಂಗಳಿಂದಲೂ ನಿಯಂತ್ರಿಸಿದೆ. ಕಣ್ಣಿನ ಆರೋಗ್ಯದ ಮೇಲೂ ಕೊರೊನಾ ತನ್ನ ಪ್ರಭಾವ ಬೀರಿದೆ. ಸೂಕ್ತ ಸಮಯದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗಳು ದೊರೆಯದೇ ಕಣ್ಣಿನ ಸಮಸ್ಯೆ ಇರುವವರು ಪರಿತಪಿಸುವಂತಾಗಿದೆ.

ಪ್ರತಿ ತಿಂಗಳ ಮೊದಲ ಸೋಮವಾರ ಬರುತ್ತಿದ್ದಂತೆ ನಗರದಲ್ಲಿನ ಲಯನ್ಸ್‌ ಕ್ಲಬ್‌ ಭವನದ ಮುಂದೆ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದರು. ಸುಮಾರು 30 ವರ್ಷಗಳಿಂದಲು ಒಂದು ತಿಂಗಳು ಸಹ ತಪ್ಪದೆ ಇಲ್ಲಿಯವರೆಗೆ ಅಂದರೆ 2020ರ ಮಾರ್ಚ್ 2ಕ್ಕೆ ಒಟ್ಟು 265ನೇ ಶಿಬಿರವನ್ನು ಆಯೋಜಿಸುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು. ಆದರೆ ಈ ಬಾರಿ ಏ.6ರಂದು ನಡೆಯಬೇಕಿದ್ದ ಶಿಬಿರ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಮುಂದಿನ ಮೇ 4ರಂದು ನಡೆಯಲಿರುವ ಶಿಬಿರವೂ ಸಹ ಮುಂದೂಡಲಾಗುತ್ತಿದೆ. ಪ್ರತಿ ಗುರುವಾರದಂದು ಲಯನ್ಸ್ ಕ್ಲಬ್‍ನಲ್ಲಿ ಕಣ್ಣಿನ ತಪಾಸಣೆಗೆ ತಜ್ಞ ವೈದ್ಯರು ಆಗಮಿಸುತ್ತಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿರುವವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಶಿಫಾರಸ್ಸು ಮಾಡಲಾಗುತ್ತಿತ್ತು. ಇದಲ್ಲದೇ ಪ್ರತಿ ತಿಂಗಳು ಸುಮಾರು 200 ರಿಂದ 250 ಮಂದಿಗೆ ಕಣ್ಣಿನ ತಪಾಸಣೆಗೆ ಒಳಗಾಗುತ್ತಿದ್ದರು. ಇವರಲ್ಲಿ 50 ರಿಂದ 60 ಮಂದಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹಿಂದಿರುಗುತ್ತಿದ್ದರು. ಪ್ರತಿ ತಿಂಗಳು ಶಿಬಿರವನ್ನು ದಾನಿಗಳು ಪ್ರಾಯೋಜಿಸುತ್ತಿದ್ದರು. ಆರ್ಥಿಕವಾಗಿ ಹಿಂದುಳಿದವರಿಗೆ ಶಿಬಿರಗಳು ವರದಾನವಾಗಿತ್ತು. ಆದರೆ ಶಿಬಿರಗಳು ನಡೆಯದೇ ಇರುವುದರಿಂದ ಕಣ್ಣಿನ ಸಮಸ್ಯೆ ಇರುವ ನೂರಾರು ಜನ ಹಿರಿಯ ನಾಗರೀಕರು ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ದಿನ ನಿತ್ಯದ ಬದುಕನ್ನು ಅಂಧಕಾರದಲ್ಲಿ ಕಳೆಯುತ್ತಿದ್ದಾರೆ.

‘ಲಯನ್ಸ್ ಕ್ಲಬ್‍ನಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಇದುವರೆವಿಗೂ ಯಾವುದೇ ಕಾರಣಕ್ಕೂ ನಿಲ್ಲಿಸಿರಲಿಲ್ಲ. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಶಿಬಿರಗಳನ್ನು ನಡೆಸಲು ಸಾಧ್ಯಗುತ್ತಿಲ್ಲ.ಸರ್ಕಾರ ಶಿಬಿರಗಳನ್ನು ಆಯೋಜಿಸಲು ಅನುಮತಿ ನೀಡಿದರೆ ಶಿಬಿರಗಳನ್ನು ನಡೆಸಬಹುದಾಗಿದೆ’ ಎನ್ನುತ್ತಾರೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಮೋಹನ್‌ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT