ಭಾನುವಾರ, ಆಗಸ್ಟ್ 1, 2021
22 °C
ಮಾಂಸ ಖರೀದಿಗೆ ಸಾಲುಗಟ್ಟಿ ನಿಂತ ಜನ

ಭಾನುವಾರದ ಲಾಕ್‌ಡೌನ್‌ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಾರಿಗೊಳಿಸಿರುವ ಭಾನುವಾರದ ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಕೊಂಗಾಡಿಯಪ್ಪ ಬಸ್ ನಿಲ್ದಾಣ, ತಾಲ್ಲೂಕು ಕಚೇರಿ ವೃತ್ತ, ಮಾರುಕಟ್ಟೆ ಪ್ರದೇಶ, ಮಹಾತ್ಮ ಗಾಂಧಿ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಬಸವ ಭವನದ ವೃತ್ತ, ಟಿಬಿ ವೃತ್ತ, ಡಿ.ಕ್ರಾಸ್ ವೃತ್ತ ಸೇರಿದಂತೆ ನಗರದ ಬಹುತೇಕ ಕಡೆ ಅಂಗಡಿಗಳ ಬಾಗಿಲು ಮುಚ್ಚಲಾಗಿತ್ತು. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮೆಡಿಕಲ್ ಸ್ಟೋರ್‌, ಕ್ಲಿನಿಕ್‍ಗಳು, ಹಾಲಿನ ಬೂತ್ ಮುಂತಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟುಗಳು ಸ್ತಬ್ಧವಾಗಿದ್ದವು.

ರಸ್ತೆಯಲ್ಲಿ ಸಂಚಾರ ವಿರಳವಾಗಿತ್ತು. ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ, ಮುಖ್ಯರಸ್ತೆ, ಡಿ.ಕ್ರಾಸ್, ಟಿ.ಬಿ.ವೃತ್ತ, ತಾಲ್ಲೂಕು ಕಚೇರಿ ವೃತ್ತಗಳಲ್ಲಿ ವಾಹನಗಳ ಹಾಗೂ ಜನ ಸಂಚಾರ ಇರಲಿಲ್ಲ. ತಾಲ್ಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಪ್ರಮುಖ ದೇವಾಯಗಳನ್ನು ಬಂದ್ ಮಾಡಲಾಗಿತ್ತು.

ಒಂದೆಡೆ ಲಾಕ್‍ಡೌನ್ ಕಾರಣದಿಂದಾಗಿ ಇಡೀ ನಗರ ಸ್ತಬ್ಧವಾಗಿದ್ದರೆ ಮಾಂಸದಂಗಡಿಗಳ ಮುಂದೆ ಮಾತ್ರ ಜನರು ಸಾಲಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. ಆದರೆ ‌ಈ ಅಂಗಡಿಗಳ ಮುಂದೆ ಅಂತರ ಕಾಯ್ದುಕೊಳ್ಳುವ ನಿಯಮ ಮರೆಯಾಗಿತ್ತು.

ಮಂಗಳವಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರವೇ ಅಧಿಕೃತವಾಗಿ ಲಾಕ್‌ಡೌನ್‌ ಘೋಷಿಸಿರುವುದರಿಂದ ಸೋಮವಾರ ವಾಣಿಜ್ಯ ವಹಿವಾಟು, ಬ್ಯಾಂಕ್‍, ಕಚೇರಿಗಳು ಹಾಗೂ ಅಂಗಡಿಗಳ ಮುಂದೆ ಜನರು ಹೆಚ್ಚಾಗಿ ಸೇರುವ ಸಂಭವ ಇದೆ. ಈ ನಿಟ್ಟಿನಲ್ಲಿ ಜನ ಸಂದಣಿ ಇರುವಲ್ಲಿ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ನಿಯಂತ್ರಣ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಗ್ರಾಮೀಣ ಪ್ರದೇಶಕ್ಕೂ ಹರಡಿದ ಕೊರೊನಾ

ನಗರ ಪ್ರದೇಶದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದವು. ಭಾನುವಾರ ಗ್ರಾಮಾಂತರ ಪ್ರದೇಶದ ಹೆಗ್ಗಡಿಹಳ್ಳಿ, ಬೀಡಿಕೆರೆ ಗ್ರಾಮದಲ್ಲಿ ಎರಡು ಕೋವಿಡ್‌-19 ದೃಢಪಟ್ಟಿವೆ.

ಇಷ್ಟು ದಿನಗಳ ಕಾಲ ಕೋವಿಡ್‌-19 ದೃಢಪಟ್ಟ ಬಹುತೇಕ ಮಂದಿ ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಹಾಗೂ ಬೆಂಗಳೂರಿಗೆ ವ್ಯಾಪಾರ ವಹಿವಾಟು ಸೇರಿದಂತೆ ವಿವಿಧ ಕಾರಣಗಳಿಗಾಗಿ ಹೋಗಿ ಬರುತ್ತಿದ್ದವರಲ್ಲಿ ಮಾತ್ರ ಸೋಂಕು ಕಂಡು ಬರುತಿತ್ತು. ಆದರೆ ಈಗ ಸ್ಥಳೀಯರು, ಗ್ರಾಮೀಣ ಪ್ರದೇಶದ ಜನರಲ್ಲು ಕೋವಿಡ್‌-19 ದೃಢ ಪಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.