ಸೋಮವಾರ, ಮೇ 23, 2022
30 °C

ದೊಡ್ಡಬಳ್ಳಾಪುರ | ಈರುಳ್ಳಿ ಮಳಿಗೆಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ನಗರದ ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ ಲೋಕಾಯುಕ್ತ ಎಸ್.ಪಿ ಪವನ್ ನಿಜ್ಜೂರ್ ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡ ಭೇಟಿ ನೀಡಿ ಸಗಟು ಈರುಳ್ಳಿ ಮಾರಾಟ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದರು.

ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೆಲವು ವ್ಯಾಪಾರಿಗಳು ಈರುಳ್ಳಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ಈ ಪರಿಶೀಲನೆ ನಡೆಯಿತು.

ಎಪಿಎಂಸಿ ಮಾರುಕಟ್ಟೆಯ ಈರುಳ್ಳಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ತಂಡ ಅಂಗಡಿಗಳಲ್ಲಿದ್ದ ಈರುಳ್ಳಿ ದಾಸ್ತಾನು ಪರಿಶೀಲಿಸಿದರು. ಆದರೆ, ಮಾರುಕಟ್ಟೆಯಲ್ಲಿ ಹೆಚ್ಚಿನ ದಾಸ್ತಾನು ಮಾಡಿರುವ ಯಾವುದೇ ಮಳಿಗೆಗಳು ಕಂಡು ಬರಲಿಲ್ಲ.

‘ನಮ್ಮ ಸುತ್ತಲಿನ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆ ಇಲ್ಲ. ಬೆಂಗಳೂರಿನ ಯಶವಂತಪುರ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಈರುಳ್ಳಿ ತಂದು ಮಾರಾಟ ಮಾಡುತ್ತಿದ್ದೇವೆ. ಟನ್‍ಗಟ್ಟಲೆ ದಾಸ್ತಾನು ಮಾಡುವ ಶಕ್ತಿಯೂ ನಮಗಿಲ್ಲ. ಈಗ ಹಳೇ ಈರುಳ್ಳಿ ದಾಸ್ತಾನು ಕಡಿಮೆಯಾಗಿದೆ. ಬೆಲೆ ಕುಸಿತವಾಗುತ್ತಿರುವುದರಿಂದ ಈರುಳ್ಳಿ ಮೂಟೆಗೆ ₹1,500 ನಷ್ಟ ಅನುಭವಿಸುವಂತಾಗಿದೆ’ ಎಂದು ಮಾರಾಟಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈರುಳ್ಳಿ ಸೇರಿದಂತೆ ಇತರ ತರಕಾರಿಗಳನ್ನು ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಲಾಭ ಯಾರಿಗೋ ಹೋಗುತ್ತಿದೆ. ಎಪಿಎಂಸಿ ಮಾರುಕಟ್ಟೆ ಸೀಮಿತವಾಗಿದ್ದು, ಇಲ್ಲಿ ಹೆಚ್ಚಿನ ತರಕಾರಿಯನ್ನು ಹರಾಜು ಮಾಡಲು ಸೌಲಭ್ಯವಿಲ್ಲ. ಹೀಗಾಗಿ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು. ಶೈತ್ಯಾಗಾರಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ ಎಂದು ರೈತರು ಮನವಿ ಮಾಡಿದರು.

ಎಪಿಎಂಸಿ ಕಾರ್ಯದರ್ಶಿ ಸಿ.ಎಲ್.ಸಿದ್ಧಲಿಂಗಸ್ವಾಮಿ, ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿ, ಎಪಿಎಂಸಿ ಪ್ರಧಾನ ಮಾರುಕಟ್ಟೆಯಾಗಿಲ್ಲ. ಇಲ್ಲಿ ಈರುಳ್ಳಿ , ಬೆಳ್ಳುಳ್ಳಿಗಳನ್ನು ಬೇರೆಡೆಯಿಂದ ತಂದು ಮಾರಾಟ ಮಾಡಲಾಗುತ್ತಿದೆ. ಅಂಗಡಿಗಳಲ್ಲಿ ನಿಯಮಬಾಹಿರವಾಗಿ ಹೆಚ್ಚಿನ ದಾಸ್ತಾನು ಮಾಡದಂತೆ ಸೂಚನೆ ನೀಡಲಾಗಿದೆ ಎಂದರು.

ಭೇಟಿ ಕುರಿತಂತೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್.ಪಿ ಪವನ್ ನಿಜ್ಜೂರ್, ಈರುಳ್ಳಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಈರುಳ್ಳಿ ಕಾಳಸಂತೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಂಡಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ವಿವಿಧ ತಂಡಗಳಿಂದ ಪರಿಶೀಲಿಸಲಾಗುತ್ತಿದೆ. ಇಲ್ಲಿ ಯಾವುದೇ ಅಕ್ರಮ ದಾಸ್ತಾನು ಕಂಡು ಬಂದಿಲ್ಲ. ಮುಂದೆ ಯಾವುದೇ ಅಕ್ರಮ ಮಾರಾಟಕ್ಕೆ ಆಸ್ಪದ ನೀಡದಂತೆ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‍ಪಿ ಶಶಿಕಲಾ, ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಎಸ್.ವೆಂಕಟೇಶ್, ಚಿಕ್ಕರಾಜ ಶೆಟ್ಟಿ, ಶಿವರಾಜ್, ಸುರೇಶ್, ಸಿಬ್ಬಂದಿ ಪ್ರದೀಪ್, ನಾಗೇಶ್ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು