ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗಲಿದ ಬಿಜೆಪಿ ನಾಯಕರು, ತುಂಬಲಾರದ ನಷ್ಟ’

Last Updated 8 ಸೆಪ್ಟೆಂಬರ್ 2019, 14:48 IST
ಅಕ್ಷರ ಗಾತ್ರ

ದೇವನಹಳ್ಳಿ: ದೇಶಕ್ಕಾಗಿ ದುಡಿದ ಅದ್ವಿತೀಯರ ಸಾಧನೆಯ ಪರಿಚಯ ಸಮಾಜದಲ್ಲಿರುವ ಯುವ ಪೀಳಿಗೆಗೆ ಜಾಗೃತಿ ಮೂಡಿಸುವಂತದ್ದು ಎಂದು ಆರ್‌ಎಸ್‌ಎಸ್‌ ಮುಖಂಡ ಕೇಶವ ಪ್ರಸಾದ್ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಪರಿಮಿತ ಸ್ನೇಹಕೂಟ ವತಿಯಿಂದ ನಡೆದ ಅದ್ವಿತೀಯರ ಒಂದು ಸ್ಮರಣ ಕಾರ್ಯಕ್ರಮದಲ್ಲಿ ಈಚೆಗೆ ನಿಧನ ಹೊಂದಿದ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅನಂತಕುಮಾರ್ ಮತ್ತು ಮನೋಹರ್ ಪರ್ರಿಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ಈ ನಾಲ್ವರು ನಾಯಕರು ವಿದ್ಯಾರ್ಥಿ ದೆಸೆಯಲ್ಲೇ ಮುಂಚೂಣಿ ಯುವನಾಯಕರಾಗಿ ದೇಶ ಸೇವೆ, ದೇಶಭಕ್ತಿ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡು ಬಂದವರು. ಇವರು ವಯೋಸಹಜವಾಗಿ ಮರಣ ಹೊಂದಿದವರಲ್ಲ. ಎಪ್ಪತ್ತು ವರ್ಷ ದಾಟದೆ ಅಕಾಲಿಕ ಮರಣ ಹೊಂದಿದ್ದು ದೇಶಕ್ಕೆ ಮತ್ತು ಯುವ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಹೇಳಿದರು.

ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಆರ್ಥಿಕ ಪ್ರಗತಿ ಚೇತರಿಕೆಗೆ ಅನೇಕ ರೂಪುರೇಷೆಗಳನ್ನು ಜಾರಿಗೊಳಿಸಿದ್ದರು. ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ತಮ್ಮ 25ನೇ ವರ್ಷದಲ್ಲೇ ಹರಿಯಾಣ ಜನತಾ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೇರಿದ ಅಪ್ರತಿಮ ವಾಗ್ಮಿಯಾಗಿದ್ದರು ಎಂದರು.

‘ಪರ್ರಿಕರ್‌ ಅವರು ಕೇಂದ್ರದ ರಕ್ಷಣಾ ಸಚಿವರಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. ದೇವನಹಳ್ಳಿ ತಾಲ್ಲೂಕು ಹೆಗ್ಗನಹಳ್ಳಿ ಗ್ರಾಮದಲ್ಲಿ ಹುಟ್ಟಿದ್ದ ಅನಂತ ಕುಮಾರ್ ಬಿಜೆಪಿ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿ ಪಾರದರ್ಶಕವಾಗಿ ತಮ್ಮ ಖಾತೆಯನ್ನು ನಿಭಾಯಿಸಿದವರು. ಈ ಮಹಾನ್ ನಾಯಕರು ಗ್ರಾಮೀಣ ಪ್ರದೇಶದಿಂದಲೇ ಹಂತಹಂತವಾಗಿ ಈ ಮಟ್ಟದವರೆಗೆ ಬೆಳೆದು ನಾಯಕತ್ವವನ್ನು ಸಾಬೀತು ಪಡಿಸಿದ್ದಾರೆ’ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪರಿಷದ್ ಸದಸ್ಯ ಗುರುಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ, ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್, ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ತಾಲ್ಲೂಕು ಘಟಕ ಅಧ್ಯಕ್ಷೆ ನಾಗವೇಣಿ, ಮುಖಂಡರಾದ ಜಿ.ಚಂದ್ರಣ್ಣ, ಸುರೇಶ್ ಆಚಾರ್, ಲೋಹಿತ್, ಸುಮೀತ್, ಮಂಜುನಾಥ್, ಪುನೀತಾ, ಸುಬ್ರಮಣ್ಯ, ಗಣೇಶ್ ಮತ್ತು ಪರಿಮಿತ ಸ್ನೇಹಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT