ಮಂಗಳವಾರ, ಅಕ್ಟೋಬರ್ 22, 2019
25 °C
‘ಇಕೋ ಟೂರಿಸಂ’ ಗುರುತು, ಭೂ ಪ್ರದೇಶ ರೋಮಾಂಚನ ದೃಶ್ಯ

ಚಾರಣಿಗರ ನೆಚ್ಚಿನ ತಾಣ ಮಾಕಳಿ ಬೆಟ್ಟ

Published:
Updated:

ದೊಡ್ಡಬಳ್ಳಾಪುರ: ಈ ವರ್ಷ ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದೆ. ಹುಬ್ಬೆ ಮಳೆ ಆರಂಭವಾಯಿತೆಂದರೆ ಮುಂಗಾರು ಮಳೆ ಮುಕ್ತಾಯದ ಹಂತಕ್ಕೆ ಬಂದಿದೆ ಎಂದೇ ಅರ್ಥ. ಸಣ್ಣದಾಗಿ ಹನಿಯುತ್ತಿರುವ ಮಳೆಗೆ ತಾಲ್ಲೂಕಿನ ಸಾಸಲು ಹೋಬಳಿಯ ಮಾಕಳಿ ಬೆಟ್ಟವು ಸಹ ಹಸಿರನ್ನೇ ಮೈಗೆ ಹೊದ್ದು ನಿಂತಂತೆ ಹಸಿರಿನಿಂದ ಕಂಗೊಳಿಸುತಿದ್ದು ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದೆ.

ಹೀಗಾಗಿಯೇ ಬೆಟ್ಟಕ್ಕೆ ಬರುವ ಚಾರಣಿಗರ ಸಂಖ್ಯೆ ಹೆಚ್ಚಾಗಿದೆ. ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳು ಇಲ್ಲವಾದರು ಕಾಲು ನಡಿಗೆಯಲ್ಲಿ ಹತ್ತಲು ಸಾಧ್ಯವಾಗುವಂತಹ ಸಹಜವಾಗಿಯೇ ಬೆಟ್ಟದಲ್ಲಿ ನಿರ್ಮಾಣವಾಗಿರುವ ಕಾಲು ದಾರಿಯಿದೆ. ಬೆಟ್ಟಕ್ಕೆ ಬರುವ ಹೊಸಬರು ದಾರಿ ತಪ್ಪದಿರಲಿ ಎಂದು ಬಂಡೆಗಳ ಮೇಲೆ ಬಾಣದ ಚಿಹ್ನೆಗಳಿಂದ ಮಾರ್ಗ ಸೂಚಿಸುವ ಗುರುತುಗಳನ್ನು ಬರೆಯಲಾಗಿದೆ.

ಮಾಕಳಿ ಬೆಟ್ಟದ ಮೇಲೆ ಅಷ್ಟೇನು ವಿಶಾಲತೆಯನ್ನು ಹೊಂದಿಲ್ಲವಾದರು ಕೋಟೆ ಇದೆ. ಪಾಳೆಗಾರರ ಆಡಳಿತದ ಅಂದಿನ ಕಾಲಕ್ಕೆ ಮದ್ದುಗುಂಡುಗಳನ್ನು ಸಂಗ್ರಹಿಸಿಡುವ ಸುರಕ್ಷಿತ ತಾಣವಾಗಿಯು ಈ ಬೆಟ್ಟ ಹೆಸರು ಮಾಡಿದೆ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಸಹ ಬೆಟ್ಟದ ಮೇಲೆ ಮದ್ದಿನ ಮನೆಯನ್ನು ಕಾಣಬಹುದಾಗಿದೆ. ಈಗಲು ಈ ಮದ್ದಿನ ಮನೆಗಳು ಸುಸ್ಥಿತಿಯಲ್ಲಿವೆ. ಮಳೆ ಬಂದರೆ ಈ ಮನೆಗಳಲ್ಲಿ ಅಥವಾ ಮಾಕಳಿ ಮಲ್ಲೇಶ್ವರ ದೇವಾಲಯದಲ್ಲಿ ನಿಂತು ರಕ್ಷಣೆ ಪಡೆಯಬಹುದಾಗಿದೆ.

ಬೆಟ್ಟದ ಮೇಲೆ ಕುಡಿಯುವ ನೀರಿಗೆ ಯಾವುದೇ ಸೌಲಭ್ಯ ಇಲ್ಲ. ಬಂಡೆಗಳ ನಡುವೆ ಮೂರು ಸ್ಥಳಗಳಲ್ಲಿ ಮಳೆ ನೀರು ಸಂಗ್ರಹವಾಗಲು ಪುಟ್ಟ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ. ಕುಡಿಯಲು ಅಷ್ಟೇನು ಶುದ್ಧವಾಗಿರುವುದಿಲ್ಲ. ಆದರೂ ಬಳಸಿಕೊಳ್ಳಬಹುದಾಗಿದೆ.

ಮಾಕಳಿ ಬೆಟ್ಟವನ್ನು ಅರಣ್ಯ ಇಲಾಖೆ ‘ಇಕೋ ಟೂರಿಸಂ’ ಸ್ಥಳವನ್ನಾಗಿ ಗುರುತಿಸಿರುವುದರಿಂದ ಮುಂಚಿತವಾಗಿಯೇ ಆನ್‌ಲೈನ್‌ ಮೂಲಕ ಕಾಯ್ದಿರಿಸಿಕೊಂಡು ಬೆಟ್ಟಕ್ಕೆ ಚಾರಣ ಹೋಗಬಹುದಾಗಿದೆ. ರಾತ್ರಿ ವೇಳೆ ಬೆಟ್ಟದ ಮೇಲೆ ಉಳಿಯಲು ಅಥವಾ ಬೆಳಿಗ್ಗೆ ಇನ್ನು ಕತ್ತಲು ಇರುವಂತೆಯೇ ಬೆಟ್ಟಕ್ಕೆ ಹತ್ತಲು ಅವಕಾಶ ಇಲ್ಲ. ಅತಿಕ್ರಮ ಪ್ರವೇಶ ಮಾಡಿದರೆ ಅರಣ್ಯ ಇಲಾಖೆ ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶ ಇದೆ.

‘ಬೇಸಿಗೆ ವೇಳೆಯಲ್ಲಿ ಬೆಟ್ಟ ಹತ್ತುವುದಕ್ಕೂ, ಮಳೆಗಾಲದಲ್ಲಿ ಬೆಟ್ಟ ಹತ್ತಿ ಬೆಟ್ಟದ ಮೇಲೆ ನಿಂತು ಸುತ್ತಲಿನ ಇಡೀ ಭೂ ಪ್ರದೇಶ ಹಸಿರು ಸೀರೆಯುಟ್ಟಂತೆ ಕಾಣುವ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ದೃಶ್ಯವನ್ನು ನೋಡುವಾಗ ರೋಮಾಂಚನವಾಗುತ್ತದೆ’ ಎನ್ನುತ್ತಾರೆ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌.

ಔಷಧಿಯ ಸಸ್ಯ ವೈವಿದ್ಯಕ್ಕು ಹೆಚ್ಚು ಪ್ರಸಿದ್ದಿಯನ್ನು ಪಡೆದ ಮಾಕಳಿ ಬೆಟ್ಟದಲ್ಲಿ ಇತ್ತೀಚೆಗಷ್ಟೆ ಅರಣ್ಯ ಇಲಾಖೆ, ಏಟ್ರಿ ಸಂಸ್ಥೆಯ ಸಹಯೋಗದೊಂದಿಗೆ ಔಷಧಿಯ ಸಸ್ಯೆಗಳಲ್ಲೇ ಬಹು ಮಹತ್ವ ಪಡೆದಿರುವ ಮಾಕಳಿ (ಮಾಗಳಿ)ಬೇರಿನ ಸಮೀಕ್ಷೆ ನಡೆಸಲಾಗಿದೆ ಎನ್ನುತ್ತಾರೆ.

ಮಾಕಳಿ ಬೆಟ್ಟದಲ್ಲಿ ಅಳಿವಿನ ಅಂಚಿನಲ್ಲಿದ್ದ ಮಾಗಳಿ ಸಸ್ಯ ಈಗಲು ಬಂಡೆಗಳ ನಡುವೆ ಬೆಳೆದು ನಿಂತಿರುವುದನ್ನು ಪತ್ತೆ ಹಚ್ಚಿ ಗುರುತಿಸಿ ಸಂರಕ್ಷಿಲಾಗಿದೆ. ಈಗ ಒಂದಿಷ್ಟು ಮಳೆಯಾಗಿರುವುದರಿಂದ ಮಾಗಳಿ ಸಸ್ಯದ ಬಳ್ಳಿಗಳು ಹಸಿರಿನಿಂದ ಕಂಗೊಳಿಸುತ್ತಿವೆ ಎಂದು ತಿಳಿಸುತ್ತಾರೆ.

ಬೆಟ್ಟದ ಮೇಲೆ ವಿಶಾಲವಾದ, ಸಮತಟ್ಟಾದ ಭೂಮಿ ಇಲ್ಲವಾದರು ಸಹ ಇರುವ ಭೂಮಿಯನ್ನೆ ಬಳಸಿಕೊಂಡು ಪಾಳೆಗಾರರ ಕಾಲಕ್ಕಾಗಲೇ ಮಳೆ ನೀರು ಬೆಟ್ಟದ ಮೇಲಿನಿಂದ ಜೋರಾಗಿ ಹರಿದು ಕೆಳಗೆ ಬಾರದಂತೆ ಸ್ಥಳೀಯವಾಗಿಯೇ ದೊರೆಯುವ ಕಲ್ಲುಗಳನ್ನೆ ಬಳಸಿಕೊಂಡು ಪುಟ್ಟ ಪುಟ್ಟ ಚೆಕ್‌ ಡ್ಯಾಂಗಳನ್ನು(ತಡೆಗೊಡೆಗಳನ್ನು) ನಿರ್ಮಿಸಿ ನೀರು ಅಲ್ಲಿಯೇ ನಿಂತು ಇಂಗುವಂತೆ ಮಾಡಲಾಗಿದೆ ಎಂದು ತಿಳಿಸುತ್ತಾರೆ.

ಚಿದಾನಂದ್‌ ಆವರ ಪ್ರಕಾರ, ಮಳೆ ಹೆಚ್ಚಾದರಷ್ಟೇ ಬೆಟ್ಟದ ಮೇಲಿನಿಂದ ನೀರು ಕೆಳಗೆ ಹರಿದು ಬರುತ್ತವೆ. ಉಳಿದಂತೆ ಬೆಟ್ಟದ ಮೇಲಿನ ಪುಟ್ಟ ಪುಟ್ಟ ತಡೆಗಳಲ್ಲಿಯೇ ಸಂಗ್ರಹವಾಗಿ ಇಂಗುತ್ತವೆ. ಇದರಿಂದ ಬೆಟ್ಟದಲ್ಲಿನ ಸಣ್ಣಪುಟ್ಟ ಪ್ರಾಣಿ, ಪಕ್ಷಿಗಳಿಗೆ ಮಳೆ ಇಲ್ಲದಾಗಲು ಕುಡಿಯಲು ನೀರು ದೊರೆಯುವಂತಾಗಿದೆ. ಇದಲ್ಲದೆ ಬೆಟ್ಟದ ತುಂದಿಯಲ್ಲಿ ಮಳೆ ನೀರು ಸಂಗ್ರಹವಾಗಿ ಇಂಗುವುದರಿಂದ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿರುವ ಬಾವಿ, ಪುಟ್ಟ ಕಲ್ಯಾಣಿಗಳಲ್ಲಿ ಬೇಸಿಗೆ ಸಮಯದಲ್ಲೂ ಸಹ ನೀರು ನಿಲ್ಲಲು ಕಾರಣವಾಗಿದೆ ಎನ್ನುತ್ತಾರೆ ಅವರು.

 

ಕಾಡು ಮಲ್ಲೇಶ್ವರಸ್ವಾಮಿ ನೆಲೆಬೀಡು: ಬೆಟ್ಟದ ಮೇಲಿರುವ ಕಾಡು ಮಲ್ಲೇಶ್ವರಸ್ವಾಮಿ ಪೂರ್ವಾಭಿಮುಖವಾಗಿ ಮುಖ ಮಾಡಿನಿಂತಿದ್ದು ಈ ದೇವಾಲಯವನ್ನು ಮಾರ್ಕಂಡೇಯ ಋಷಿ ಸ್ಥಾಪಿಸಿರುವುದು ಎನ್ನಲಾಗುತ್ತಿದೆ. ಮಾಕಳಿ, ಗುಂಡಮಗೆರೆ ಗ್ರಾಮದ ಹಿರಿಯರ ನಂಬಿಕೆಯಂತೆ ಬರಗಾಲದಲ್ಲಿ ದುರ್ಗದ ಮೇಲಿರುವ ದೇವಾಲಯಕ್ಕೆ ತೆರಳಿ ಮಾಕಳಿ ಕಾಡು ಮಲ್ಲೇಶ್ವರನಿಗೆ ಪೂಜೆ ಸಲ್ಲಿಸಿ ರಾತ್ರಿಯೆಲ್ಲ ಭಜನೆ ಸಲ್ಲಿಸಿ ದೀಪ ಬೆಳಗಿಸಿದ ಕೂಡಲೆ ಮಳೆಯಾಗುತ್ತದೆ ಎನ್ನುವ ನಂಬಿಕೆ ಗಾಢವಾಗಿದೆ.

ಇತಿಹಾಸದಲ್ಲಿ ಮಾಕಳಿ ದುರ್ಗಾ: ಮಾಕಳಿ ಬೆಟ್ಟದಲ್ಲಿ ಟಿಪ್ಪು ಸುಲ್ತಾನನು ಕೋಟೆಯನ್ನು ನಿರ್ಮಿಸುವ ಮೊದಲೇ ವಿಜಯನಗರ ಕಾಲಾವಧಿಯಲ್ಲಿ ಆವತಿ ನಾಡಪ್ರಭುಗಳು ದೊಡ್ಡಬಳ್ಳಾಪುರದ ಪಾಳೆಗಾರರು ದೊಡ್ಡಬಳ್ಳಾಪುರ ಪಟ್ಟದಲ್ಲಿ ಕೋಟೆಯನ್ನು ನಿರ್ಮಿಸುವ ಕಾಲಕ್ಕೆ ಇಲ್ಲಿಯೂ ಬೃಹತ್ ಕೋಟೆಯೊಂದನ್ನು ನಿರ್ಮಿಸಿದ್ದರು. ಅದು ಇಂದಿಗೂ ಮಾಕಳಿದುರ್ಗವೆಂದೇ ಪ್ರಸಿದ್ಧವಾಗಿದೆ.

ಟಿಪ್ಪು ಈ ಹಿಂದೆ ಕಟ್ಟಿದ ಕೋಟೆಯ ಎತ್ತರವನ್ನು ಮತ್ತಷ್ಟೆ ಹೆಚ್ಚಿಸಿದ್ದಾನೆ.ಅಲ್ಲದೆ ಕೋಟೆಯ ಗೋಡೆಯ ಮೇಲೆ ಕಾವಲು ಬುರುಜುಗಳನ್ನು ಕಟ್ಟಿಸಿರುವನು.

 

 

 

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)