ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಯೋಜನೆ ರೂಪಿಸಿ

ನಗರಸಭೆ ಆವರಣದಲ್ಲಿ ಕೊಂಗಾಡಿಯಪ್ಪ ಪುತ್ಥಳಿ ಸ್ಥಾಪನೆಗೆ ಚಿಂತನೆ
Last Updated 22 ಫೆಬ್ರುವರಿ 2020, 13:48 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನೂತನವಾಗಿ ನಿರ್ಮಾಣವಾಗುತ್ತಿರುವ ನಗರಸಭೆ ಕಾರ್ಯಾಲಯದ ಬಳಿ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಪುತ್ಥಳಿ ಸ್ಥಾಪನೆ ಹಾಗೂ ಸಭಾಂಗಣಕ್ಕೆ ಅವರ ಹೆಸರು ನಾಮಕರಣ ಮಾಡುವ ಪ್ರಸ್ತಾವಕ್ಕೆ ಸಹಮತವಿದೆ. ಈ ಕುರಿತು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಕೊಂಗಾಡಿಯಪ್ಪ ಅವರ 159ನೇ ಜನ್ಮದಿನ ಆಚರಣೆ ಅಂಗವಾಗಿ ನಗರದ ಮುಖ್ಯರಸ್ತೆ ಮಾರುಕಟ್ಟೆ ಶಾಲೆ ಮುಂಭಾಗದಲ್ಲಿ ನೂತನ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ನಗರದ ಅಭಿವೃದ್ಧಿಯಲ್ಲಿ ಅವರ ಸೇವೆ ಸ್ಮರಣೀಯ. ಇಂತಹ ಮಹನೀಯರ ಜೀವನ ಇಂದಿನ ಪೀಳಿಗೆಗೆ ತಿಳಿಯಬೇಕು. ಈನಿಟ್ಟಿನಲ್ಲಿ ನಗರಸಭೆ ರಚನ್ಮಾಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ಇಂತಹ ನಿರ್ಧಾರ ಕೈಗೊಳ್ಳಲು ವಿಳಂಬವಾಗಿದೆ. ಜನಪ್ರತಿನಿಧಿಗಳ ಆಡಳಿತ ಬಂದ ತಕ್ಷಣ ಈ ಬಗ್ಗೆ ಗಮನ ಹರಿಸಲಾಗುವುದು. ನಗರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ನನ್ನ ಅವಧಿಯಲ್ಲಿ ರೂಪಿಸಲಾಗಿದೆ. ನಗರದ ಹೊರವಲಯದ ರಸ್ತೆಗಳು ವಿಸ್ತರಣೆಗೊಂಡಿವೆ. ನಗರದ ಒಳಗೂ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ನಗರಕ್ಕೆ ವಿದ್ಯುತ್, ಕೊಳವೆಬಾವಿ, ಪ್ರೌಢಶಾಲೆ, ಆಸ್ಪತ್ರೆ, ಪಶು ವೈದ್ಯಶಾಲೆ, ಕೈಮಗ್ಗ ಮತ್ತು ಗೃಹ ಕೈಗಾರಿಕಾ ತರಬೇತಿ ಶಾಲೆ ಮಂಜೂರು ಮಾಡಿಸಿದ ಕೊಂಗಾಡಿಯಪ್ಪ ಊರಿನ ಯಾವ ಸಮಸ್ಯೆಯಾದರೂ ಬಗೆಹರಿಸಲು ದುಡಿಯುತ್ತಿದ್ದರು. ಸಾಮಾನ್ಯ ಶಿಕ್ಷಕರಾಗಿದ್ದುಕೊಂಡು ಊರಿಗೆ ಮೂಲ ಸೌಲಭ್ಯ ಕಲ್ಪಿಸಿದ ಆದರ್ಶಪ್ರಾಯರು ಎಂದು ತಿಳಿಸಿದರು.

ದೇವರಾಜ ಅರಸು ವ್ಯವಹಾರ ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ರವಿಕಿರಣ್ ಮಾತನಾಡಿ, ಅವರ ಶ್ರಮ ಇಲ್ಲದಿದ್ದರೆ ಊರು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಅವರ ಪ್ರತಿಮೆ ನಗರಸಭೆ ಸಹಯೋಗದಲ್ಲಿ ನೂತನವಾಗಿ ಮರುಸ್ಥಾಪಿಸಲಾಗಿದೆ. ಅವರ ಹೆಸರಿನಲ್ಲಿ ಶಾಶ್ವತ ಯೋಜನೆ ರೂಪಿಸುವಂತೆ ಮಾಡಿದ ಮನವಿಗಳು ಮೂಲೆ ಗುಂಪಾಗಿವೆ ಎಂದು ವಿಷಾದಿಸಿದರು. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಸಿ.ಎಸ್‌.ಕರೀಗೌಡ, ದೇವಾಂಗ ಮಂಡಲಿ ಪ್ರಭಾರ ಅಧ್ಯಕ್ಷ ಕೆ.ಜಿ.ದಿನೇಶ್, ಕಾರ್ಯದರ್ಶಿ ಎ.ಎಸ್.ಕೇಶವ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್, ನಗರಸಭೆ ಪರಿಸರ ಅಧಿಕಾರಿ ಈರಣ್ಣ, ದೇವಾಂಗ ಮಂಡಲಿ ಸಹ ಕಾರ್ಯದರ್ಶಿ ಯೋಗ ನಟರಾಜ್ ಸೇರಿದಂತೆ ದೇವಾಂಗ ಮಂಡಲಿ ನಿರ್ದೇಶಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT