ಸೋಮವಾರ, ಆಗಸ್ಟ್ 26, 2019
27 °C

‘ರಕ್ತದಾನ ಮಾಡಿ ಜೀವ ಉಳಿಸಿ’

Published:
Updated:
Prajavani

ದೇವನಹಳ್ಳಿ: ‘ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದಾನ ಮಾಡಿ ಸಹಕರಿಸಬೇಕು’ ಎಂದು ಅಖಿಲ ಕರ್ನಾಟಕ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಯುವ ಶಕ್ತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎಂ.ಮೂರ್ತಿ ಹೇಳಿದರು.

ಇಲ್ಲಿನ ಲಯನ್ಸ್ ಪ್ರತಿಷ್ಠಾನ ಸಭಾಂಗಣದಲ್ಲಿ ಲಯನ್ಸ್ ಸಂಸ್ಥೆ ಮತ್ತು ಯುವಶಕ್ತಿ ಘಟಕ ವತಿಯಿಂದ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಅನೇಕ ಸಂದರ್ಭಗಳಲ್ಲಿ ರಕ್ತ ಪಡೆಯಲು ಪರದಾಟ ನಡೆಸಬೇಕಾದ ಸಂದರ್ಭಗಳು ಬರುತ್ತವೆ. ಹುಟ್ಟಿದ ಮನುಷ್ಯ ಸಮಾಜಕ್ಕೆ ಏನಾದರು ಕೊಡುಗೆ ನೀಡಲು ಹಲವು ಮಾರ್ಗಗಳಲ್ಲಿ ರಕ್ತ ದಾನವು ಒಂದಾಗಿದೆ. 18 ರಿಂದ 40ವರ್ಷದೊಳಗಿನ ಯುವಕ ಯುವತಿಯರು ರಕ್ತದಾನ ಮಾಡಲು ಅರ್ಹರು’ ಎಂದರು.

‘ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಆಗುತ್ತಿರುವ ಪ್ರವಾಹದಿಂದ ಜನ ಜಾನುವಾರುಗಳು ತತ್ತರಿಸಿ ಹೋಗುತ್ತಿವೆ, ಇಂತಹ ಸಂದಿಗ್ದ ಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದೆ’ ಎಂದು ಹೇಳಿದರು.

‘ನೆರೆ ಹಾವಳಿಗೆ ತುತ್ತಾದವರಿಗೆ ನೆರವಾಗಲು ಯುವಶಕ್ತಿ ಘಟಕ ವತಿಯಿಂದ ಹೊದಿಕೆ, ಚಾಪೆ, ಬಟ್ಟೆಗಳು, ಸೀರೆ, ಅಗತ್ಯ ದಿನಬಳಕೆ ವಸ್ತುಗಳನ್ನು ಖರೀದಿಸಲಾಗಿದ್ದು ಶೀಘ್ರದಲ್ಲೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಶ್ರೀರಾಮಯ್ಯ, ನಿರ್ದೇಶಕರಾದ ಎ. ಚಂದ್ರಪ್ಪ, ಲೋಹಿತ್, ಕೃಪಾಕರ್, ವಿಜಯ್ ಕುಮಾರ್, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಇದ್ದರು.

Post Comments (+)