ಬುಧವಾರ, ಆಗಸ್ಟ್ 21, 2019
28 °C

ಪರಿಸರಸ್ನೇಹಿ ಗಣಪತಿ ಮೂರ್ತಿ ತಯಾರಿಕೆಗೆ ಸಲಹೆ‍

Published:
Updated:
Prajavani

ವಿಜಯಪುರ: ‘ಗಣೇಶ ಚತುರ್ಥಿಯ ಅಂಗವಾಗಿ ಸಿದ್ಧಪಡಿಸಲಾಗುತ್ತಿರುವ ಗಣಪತಿ ಮೂರ್ತಿಗಳು ಪರಿಸರ ಸ್ನೇಹಿಯಾಗಿರಲಿ' ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಹೇಳಿದರು.

ಇಲ್ಲಿನ ಚನ್ನರಾಯಪಟ್ಟಣ ಸರ್ಕಲ್ ಸಮೀಪದಲ್ಲಿ ಶುಕ್ರವಾರ ಗಣೇಶಮೂರ್ತಿಗಳ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ವರ್ಷಕ್ಕೊಮ್ಮೆ ಆಚರಣೆ ಮಾಡುವ ಹಬ್ಬಗಳ ವೇಳೆಯಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ರಾಸಾಯನಿಕ ಬಣ್ಣಲೇಪಿತ ವಿಗ್ರಹಗಳ ತಯಾರಿಕೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ತಯಾರಿಗೆ ಸರ್ಕಾರ ನಿರ್ಬಂಧ ಹೇರಿದ್ದು, ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಉತ್ತಮ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ತಿಳಿವಳಿಕೆಯನ್ನೂ ನೀಡಿದ್ದೇವೆ’ ಎಂದರು. 

 ‘ಗಣೇಶಮೂರ್ತಿ ತಯಾರಿಸುವುದು ಮಾತ್ರವಲ್ಲದೆ ಬೇರೆ ಕಡೆಗಳಿಂದ ಅವುಗಳನ್ನು ತಂದು ಮಾರಾಟ ಮಾಡುವುದು ನಿಷೇಧಿಸಲಾಗಿದೆ. ಒಂದು ವೇಳೆ ಸರ್ಕಾರದ ಆದೇಶವನ್ನು ಮೀರಿ ಮಾರಾಟ ಮಾಡಲು ಇಲ್ಲವೇ ತಯಾರಿಕೆ ಮಾಡಲು ಮುಂದಾದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದರು.

ಪರಿಸರ ಎಂಜಿನಿಯರ್‌ ಮಹೇಶ್‌ಕುಮಾರ್ ಮಾತನಾಡಿ, ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33 (ಅ) ನಲ್ಲಿ  ಕುಂಟೆಗಳಲ್ಲಿ ಇತರೆ ಯಾವುದೇ ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್, ರಾಸಾಯನಿಕ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಎಲ್ಲರೂ ಅದನ್ನು ಪಾಲನೆ ಮಾಡಬೇಕು’ ಎಂದರು.

‘ಜನರ ಸಹಕಾರದಿಂದ ಕಳೆದ ವರ್ಷ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಸಂಪೂರ್ಣವಾಗಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ನಿಷೇಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸರ್ಕಾರದ ಅಧಿಸೂಚನೆಯನ್ನು ಪ್ರಸ್ತುತ ವರ್ಷ ಕೂಡ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಕಟ್ಟುನಿಟ್ಟಾಗಿ ನಿಯಂತ್ರಣಗೊಳಿಸಲಾಗುತ್ತದೆ’ ಎಂದು ಹೇಳಿದರು. 

ಗಣಪತಿ ಮೂರ್ತಿ ತಯಾರಿಕೆ ಕಲಾವಿದ ಜಿ.ರಾಜಗೋಪಾಲ್ ಮಾತನಾಡಿ, ‘ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧ್ಯಕ್ಷರಿಗೆ ಪಿ.ಒ.ಪಿ. ನಿಷೇಧಿಸುವಂತೆ ಮನವಿಪತ್ರ ಸಲ್ಲಿಸಿದ್ದೇವೆ. ನೀರಿನಲ್ಲಿ ಕರಗುವಂತಹ ರಾಸಾಯನಿಕವಲ್ಲದ ಬಣ್ಣವನ್ನು ಹಚ್ಚಿದ್ದೇವೆ. ನಮಗೆ ಮಾರಾಟಕ್ಕೆ ಅಗತ್ಯವಾಗಿರುವ ಅನುಮತಿ ಪತ್ರ ನೀಡಬೇಕು’ ಎಂದು ಮನವಿ ಮಾಡಿದರು. ಆರೋಗ್ಯ ನಿರೀಕ್ಷಕಿ ಪ್ರಭಾವತಿ ಇದ್ದರು.

Post Comments (+)