ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟಿಬಿಯನ್ನು ಖಾಯಂ ಅನರ್ಹರನ್ನಾಗಿ ಮಾಡಿ

ಸೂಲಿಬೆಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ವಿ. ಪ್ರಸಾದ್ ಟೀಕೆ
Last Updated 1 ಡಿಸೆಂಬರ್ 2019, 13:40 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಕ್ಷೇತ್ರದ ಹೆಣ್ಣು ಮಕ್ಕಳನ್ನು ನಂಬಿ ಬಂದಿದ್ದೇನೆ. ನನಗೆ ತಮ್ಮ ಅಮೂಲ್ಯ ಮತ ನೀಡಿ ಆಶೀರ್ವದಿಸಬೇಕು’ ಎಂದು ಹೊಸಕೋಟೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಮತದಾರರಲ್ಲಿ ಮನವಿ ಮಾಡಿದರು.

ಸೂಲಿಬೆಲೆ ಗ್ರಾಮದ 1ನೇ ವಾರ್ಡ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್ ಮಾತನಾಡಿ, ‘ರಾಜ್ಯ ಮತ್ತು ರಾಷ್ಟ್ರ ಕಂಡ ಧೀಮಂತ ವೀರ, ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್ ಜಯಂತಿ ರದ್ದು ಮಾಡಿದ ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸಿ, ಪದ್ಮಾವತಿ ಸುರೇಶ್ ಅವರಿಗೆ ಮತ ನೀಡಿ’ ಎಂದು ಮತದಾರರಲ್ಲಿ ವಿನಂತಿಸಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಯಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಹೊಸಕೋಟೆಯ ಏತ ನೀರಾವರಿ ಯೋಜನೆಗೆ ₹ 100 ಕೋಟಿ ಮೀಸಲಿಟ್ಟ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ; ಮಹಿಳೆ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ದೇಶದ ಚರಿತ್ರೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಉಕ್ಕಿನ ಮಹಿಳೆ ಇಂದಿರಾ ಗಾಂಧಿಯಂತಹ ಮಹಿಳೆಯರ ಸಾಧನೆ ಅಪ್ರತಿಮವಾದುದು. ಮಹಿಳೆಯರ ಶಕ್ತಿಯನ್ನು ಡಿ. 5ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರನ್ನು ಗೆಲ್ಲಿಸುವ ಮೂಲಕ ಮತದಾರರು ತೋರಿಸಬೇಕು’ ಎಂದರು.

‘2018ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಶಾಸಕರಾಗಿ ಪಕ್ಷದ ವಿಫ್ ಅನ್ನು ಉಲ್ಲಂಘನೆ ಮಾಡಿದ ಕಾರಣ ಅಂದಿನ ವಿಧಾನ ಸಭಾ ಅಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು ಅನರ್ಹ ಎಂದು ಕೊಟ್ಟ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಸಹ ಒಪ್ಪಿ, ಎಂಟಿಬಿ ನಾಗರಾಜ್ ಅವರನ್ನು ಅನರ್ಹ ಎಂದು ತೀರ್ಪು ನೀಡಿದೆ. ಮತ್ತೆ ಈ ಉಪ ಚುನಾವಣೆಯಲ್ಲಿ ಜನತಾ ನ್ಯಾಯಲಯದಲ್ಲಿ ಮತದಾರರು ಸಹ ಎಂಟಿಬಿ ನಾಗರಾಜ್‌ಗೆ ಮತಹಾಕದೆ ಅವರನ್ನು ಖಾಯಂ ಅನರ್ಹರನ್ನಾಗಿ ಮಾಡಬೇಕು. ಪದ್ಮಾವತಿ ಅವರಿಗೆ ಗೆಲುವು ನೀಡುವ ಮೂಲಕ ಹೊಸಕೋಟೆ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಮ್ಜದ್, ತಾಲ್ಲೂಕು ಪಂಚಾಯಿತಿ ಸದಸ್ಯ ಷಫಿ, ಮುಖಂಡರಾದ ಪಿ.ವಿ.ನಟರಾಜ್, ಎಸ್.ಕೆ ರಮೇಶ್, ಶಂಕರ್, ಅರುಣ್ ಕುಮಾರ್ ಸೇರಿದಂತೆ ಸುತ್ತಲಿನ ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT