ವಿಶಿಷ್ಟ ಕಾರ್ಯಕ್ರಮಗಳಿಂದ ಮಾದರಿ ಮರಸೂರು ಗ್ರಾ.ಪಂ

7

ವಿಶಿಷ್ಟ ಕಾರ್ಯಕ್ರಮಗಳಿಂದ ಮಾದರಿ ಮರಸೂರು ಗ್ರಾ.ಪಂ

Published:
Updated:
Deccan Herald

ಆನೇಕಲ್ : ಗ್ರಾಮ ಪಂಚಾಯಿತಿಗಳೆಂದರೆ ನೀರು, ರಸ್ತೆ, ವಿದ್ಯುತ್ ದೀಪ ಸೇರಿದಂತೆ ಮೂಲಸೌಲಭ್ಯಗಳನ್ನು ನೀಡುವುದೇ ತಮ್ಮ ಕೆಲಸವೆಂದು ಭಾವಿಸಿವೆ. ಆದರೆ ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿಯು ರಾಜ್ಯದಲ್ಲಿಯೇ ವಿಶಿಷ್ಟ ಮಾದರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಗ್ರಾಮ ಪಂಚಾಯಿತಿಯು ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ‘ಮಕ್ಕಳ ಮನೆ’, ಪಂಚಾಯಿತಿ ಊಟದ ಮನೆ, ಶೈಕ್ಷಣಿಕ ನೆರವು, ಅಂತಿಮ ನಮನ ಎಂಬ ವಿಶೇಷ ಕಾರ್ಯಕ್ರಮಗಳನ್ನು ಪಂಚಾಯಿತಿ ಮೂಲಕ ಅನುಷ್ಠಾನಗೊಳಿಸಿದೆ.

ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಬೇಕೆಂಬ ಉದ್ದೇಶದಿಂದ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ 2017–18ನೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಮನೆಯನ್ನು ಪ್ರಾರಂಭಿಸಲಾಯಿತು.

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರಾರಂಭಿಸಲಾದ ಮಕ್ಕಳ ಮನೆಗೆ ಪ್ರಥಮ ವರ್ಷ 40ಮಕ್ಕಳು ದಾಖಲಾದರು. ಈ ವರ್ಷ ಸಹ 40 ಮಕ್ಕಳು ದಾಖಲಾಗಿದ್ದು ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ಪಂಚಾಯಿತಿ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.

ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಶೂ ಸಾಕ್ಸ್, ಟೈ ಬೆಲ್ಟ್‌, ವಿದ್ಯಾರ್ಥಿ ಕಿಟ್ ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿ ಮಕ್ಕಳ ಮನೆಯನ್ನು ಮಾದರಿಯಾಗಿ ನಡೆಸಲಾಗುತ್ತಿದೆ.

ಮೂರು ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಪಂಚಾಯಿತಿ ವತಿಯಿಂದ ವೇತನ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಮಕ್ಕಳ ಮನೆಯಿಂದ ಸ್ಫೂರ್ತಿ ಪಡೆದು ಶಾಲೆಗೆ ಭೇಟಿ ನೀಡಿ ಮಕ್ಕಳ ಮನೆಯನ್ನು ಮಾದರಿಯಾಗಿ ನಡೆಸಬೇಕೆಂಬ ಚಿಂತನೆಯಿಂದ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಗುರಿಯೊಂದಿಗೆ ಪ್ರಾರಂಭಿಸಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ರೆಡ್ಡಿ ತಿಳಿಸಿದರು.

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಮರಸೂರು ಮಾದರಿಯಾಗಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೂರು ತಿಂಗಳಿಗೊಮ್ಮೆ ಆರೋಗ್ಯ ಕಿಟ್ ನೀಡಲಾಗುತ್ತದೆ.

ಪೇಸ್ಟ್, ಟೂತ್ ಬ್ರೆಶ್, ಸೋಪ್, ಕ್ರೀಮ್, ಶಾಂಪೂ, ನೈಲ್ ಕಟರ್, ಪೆನ್, ಪೆನ್ಸಿಲ್ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ತೇರ್ಗಡೆಯಾಗಿ ಮುಂದಿನ ತರಗತಿಗೆ ದಾಖಲಾಗುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಪಂಚಾಯಿತಿ ವತಿಯಿಂದ ತಲಾ ₹5ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.

ಇಂದಿರಾ ಕ್ಯಾಂಟೀನ್‌ನಿಂದ ಸ್ಫೂರ್ತಿ ಪಡೆದು ಮರಸೂರು ಗ್ರಾಮ ಪಂಚಾಯಿತಿಯು ‘ಪಂಚಾಯಿತಿ ಊಟದ ಮನೆ’ಯನ್ನು ಪ್ರಾರಂಭಿಸಿದ್ದು ₹10ಕ್ಕೆ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟವನ್ನು ನೀಡಲಾಗುತ್ತಿದೆ.

ತಿಂಡಿ ಮತ್ತು ಊಟಕ್ಕೆ 125 ರಿಂದ 150 ಮಂದಿ ಬರುತ್ತಿದ್ದಾರೆ. ಹೋಟೆಲ್‌ಗಿಂತ ರುಚಿಯಾಗಿ, ಶುಚಿಯಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಪಂಚಾಯಿತಿ ವತಿಯಿಂದ ಮಾಸಿಕ ₹30ರಿಂದ 40 ಸಾವಿರ ಹೆಚ್ಚುವರಿ ವೆಚ್ಚವನ್ನು ನೀಡಲಾಗುತ್ತಿದೆ. ಪಂಚಾಯಿತಿ ಊಟದ ಮನೆಯು ಮರಸೂರು ಸುತ್ತಲಿನ ಕಾರ್ಮಿಕರು, ಕೂಲಿಕಾರರಿಗೆ ಅತ್ಯಂತ ಉಪಯುಕ್ತವಾಗಿದೆ. ಗುಣಮಟ್ಟಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಎ.ಶಶಿಕಿರಣ್ ಹೇಳುತ್ತಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೃತಪಟ್ಟವರಿಗೆ ಅಂತಿಮ ಸಂಸ್ಕಾರಕ್ಕಾಗಿ ₹10 ಸಾವಿರವನ್ನು ಕುಟುಂಬಗಳಿಗೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ವರ್ಗಗಳಿಗೆ ₹15 ಸಾವಿರ ನೀಡಲಾಗುತ್ತಿದ್ದು ಅಂತಿಮ ನಮನ ಎಂಬ ಯೋಜನೆಯನ್ನು ರೂಪಿಸಿದೆ.

ಗ್ರಾಮ ಪಂಚಾಯಿತಿಗಳ ವತಿಯಿಂದ ನಡೆಯುವ ದೈನಂದಿನ ಕಾರ್ಯಕ್ರಮಗಳಿಗಿಂತ ವಿಶಿಷ್ಟವಾಗಿ ಮರಸೂರು ಗ್ರಾಮ ಪಂಚಾಯಿತಿಯು ತನ್ನದೇ ಆದ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಮಾದರಿಯಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಸಂಪರ್ಕ ರಸ್ತೆಗಳು ಸಂಪೂರ್ಣ ಡಾಂಬರೀಕರಣವಾಗಿವೆ ಹಾಗೂ ಅಗ್ರಹಾರ ಹೊರತು ಪಡಿಸಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !