ಶನಿವಾರ, ಏಪ್ರಿಲ್ 4, 2020
19 °C
ಮಾರುಕಟ್ಟೆ ನಿರ್ಮಾಣಕ್ಕೆ ಜಾಗದ ಕೊರತೆ, ಖರೀದಿ ವೇಳೆ ನೂಕುನುಗ್ಗಲು, ಕ್ರಮಕ್ಕೆ ಒತ್ತಾಯ

ರಸ್ತೆಯಲ್ಲೇ ಸಂತೆ ಭರವಸೆಗಳು ಕಂತೆ

ವಡ್ಡನಹಳ್ಳಿ  ಭೋಜ್ಯನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಅರ್ಧ ಶತಮಾನ ಪೂರೈಸಿ ಮುನ್ನಡೆಯುತ್ತಿರುವ ಪುರಸಭೆ ವ್ಯಾಪ್ತಿಯಲ್ಲಿರುವ ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ರಸ್ತೆಯಲ್ಲೇ ವಾರದ ಸಂತೆ ನಡೆಯುತ್ತಿದ್ದು, ಜನಪ್ರತಿ ನಿಧಿಗಳು ನೀಡಿದ ಭರವಸೆಗಳ ಕಂತೆ ಈವರೆಗೆ ಈಡೇರಿಲ್ಲ.

ನಿರಂತರ ಮೂಲ ಸೌಲಭ್ಯಗಳ ಸಮಸ್ಯೆಯನ್ನೆ ಒಡಲಿನಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಪುರಸಭೆ ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ದೇವನಹಳ್ಳಿ ನಗರ ಸೇರಿದಂತೆ ಇಡೀ ತಾಲ್ಲೂಕು ಅಭಿವೃದ್ಧಿಯಾಗಿ ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಆಶಾಭಾವನೆ ಹೊಂದಿದ್ದ ಸ್ಥಳೀಯರಿಗೆ ನಿರಾಸೆಯಾಗಿದೆ.

‌ವಿಮಾನ ನಿಲ್ದಾಣ ಆರಂಭವಾಗಿ ಹಲವು ವರ್ಷಗಳಾಗಿವೆ. ಬೇರೆ ರಾಜ್ಯಗಳ ಉದ್ಯೋಗಿಗಳು, ಕಟ್ಟಡ ಕೂಲಿ ಕಾರ್ಮಿಕರು ವಿಮಾನ ನಿಲ್ದಾಣ ಸಮೀಪದಲ್ಲಿರುವ ಅಣ್ಣೇಶ್ವರ, ಬೆಟ್ಟಕೋಟೆ, ಬೂದಿಗೆರೆ, ಕನ್ನಮಂಗಲ, ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ದೇವನಹಳ್ಳಿ ನಗರವೂ ಹೊರತಲ್ಲ. ಇವರೆಲ್ಲ ಬುಧವಾರ ಸಂತೆಗೆ ಬರುತ್ತಾರೆ. ಜತೆಗೆ ಕಟ್ಟಡ ಕಾರ್ಮಿಕರಿಗೆ ವಾರದ ಬಟವಾಡೆ ಭಾನುವಾರ ಇರುವುದರಿಂದ ಈಎರಡು ದಿನ ಹಳೇ ಬಸ್ ನಿಲ್ದಾಣ, ಪುಟ್ಟಪ್ಪನಗುಡಿ ಬೀದಿ, ಬೈಚಾಪುರ ರಸ್ತೆ, ವೇಣುಗೋಪಾಲಸ್ವಾಮಿ ರಸ್ತೆ ಮತ್ತು ಸಂತೆ ಮೈದಾನದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ರಸ್ತೆ ದಾಟುವವರು, ವಾಹನ ಸಂಚಾರರು ಹೈರಾಣಾಗಿ ಹಿಡಿಶಾಪ ಹಾಕುತ್ತಲೇ ಖರೀದಿಯಲ್ಲಿ ತೊಡಗಬೇಕಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಾರೆ.

ಬುಧವಾರದ ಸಂತೆ ನಡೆಯುವ ಜಾಗದ ಕೆಲವು ದಾಖಲಾತಿಗಳು ರಂಗನಾಥಸ್ವಾಮಿ ದೇವಾಲಯದ ವ್ಯಾಪ್ತಿಯ ಮುಜರಾಯಿ ಇಲಾಖೆ ಸಂಬಂಧಿಸಿದ್ದು ಎನ್ನಲಾಗಿದೆ. ಕೆಲ ದಾಖಲೆ ಪುರಸಭೆ ಇಲಾಖೆ ಹೆಸರಿನಲ್ಲಿಯೂ ಇದೆ. ರಸ್ತೆ ಬದಿಯಲ್ಲಿನ ಅಂಗಡಿ ಮಳಿಗೆಗೆಗಳಿಂದ ಸುಂಕ ವಸೂಲಿಗೆ ಪುರಸಭೆ ವಾರ್ಷಿಕ ಟೆಂಡರ್ ಮೂಲಕ ಗುತ್ತಿಗೆ ನೀಡಿದೆ.‌ ಹಳೆ ಬಸ್ ನಿಲ್ದಾಣದಿಂದ ಪೂರ್ವಭಾಗದಲ್ಲಿರುವ ಪ್ರಸ್ತುತ ಸಂತೆ ನಡೆಯುವ ರಸ್ತೆ ಒಳಭಾಗದಲ್ಲಿ ಮಾರಾಟಗಾರರಿಂದ ಮುಜರಾಯಿ ಇಲಾಖೆ ಸುಂಕ ವಸೂಲಿ ಮಾಡುತ್ತದೆ ಎಂದು ಸ್ಥಳೀಯ ನಿವಾಸಿ ಕುಮಾರ್ ತಿಳಿಸಿದರು.

ಆದರೆ ಸಂತೆ ಮೈದಾನದಲ್ಲಿ ಯಾವುದೇ ರೀತಿಯ ಮೂಲ ಸೌಲಭ್ಯವಿಲ್ಲ. ಸಂತೆ ದಿನ ಸಂಜೆ 3ರಿಂದ 7ರವರೆಗೆ ನೂಕು ನುಗ್ಗಲು ಇರುತ್ತದೆ. ಮಹಿಳೆಯರು, ವೃದ್ಧರು ಪಾಡು ಹೇಳತೀರದು. ಇಷ್ಟು ವರ್ಷವಾದರೂ ಪುರಸಭೆ ಜಾಗ ಗುರುತಿಸಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣ ಮಾಡಿಲ್ಲ. ಆಯ್ಕೆಯಾಗುವ ವಾರ್ಡ್‌ ಸದಸ್ಯರು, ಅಧಿಕಾರಿಗಳಿಗೆ ಇದರ ಕುರಿತು ಕಾಳಜಿ ಇಲ್ಲ ಎಂಬುದು ಅವರ ಆರೋಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು