ಶುಕ್ರವಾರ, ಸೆಪ್ಟೆಂಬರ್ 20, 2019
21 °C
ವಿಜಯಪುರ ತಾಲ್ಲೂಕು ಹಣ್ಣಿನ ಬೆಳೆಗಾರರ ಪಾಡು

ಮಾರುಕಟ್ಟೆ ಇಲ್ಲದೆ ಆರ್ಥಿಕ ನಷ್ಟ

Published:
Updated:
Prajavani

ವಿಜಯಪುರ: ‘ತೀವ್ರ ಮಳೆಯ ಅಭಾವದಲ್ಲೂ ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸಿ, ಕೊಳವೆಬಾವಿ ನೀರನ್ನು ನಂಬಿಕೊಂಡು ಬೆಳೆದ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿರುವುದರ ಜೊತೆಗೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

‘ಇಲ್ಲಿನ ದಂಡಿಗಾನಹಳ್ಳಿ ರಸ್ತೆಯಲ್ಲಿ ಇರುವ ಜಮೀನಿನಲ್ಲಿ 900 ಗಿಡಗಳು ದಾಳಿಂಬೆ, ದ್ರಾಕ್ಷಿ, ಸೀಬೆಗಿಡ ನಾಟಿ ಮಾಡಿದ್ದೇವೆ. ದಾಳಿಂಬೆ ಒಂದು ವರ್ಷಕ್ಕೆ ಒಂದು ಬೆಳೆ ಬರುತ್ತದೆ. ಈಗ ಬೆಳೆದಿರುವ ಬೆಳೆಗೆ ₹ 5 ಲಕ್ಷಕ್ಕೂ ಹೆಚ್ಚು ಬಂಡವಾಳ ಹಾಕಿದ್ದೇವೆ. ನೀರು ಕಡಿಮೆಯಿದ್ದರೂ ಬೆಳೆಯಬಹುದು ಎನ್ನುವ ಕಾರಣಕ್ಕೆ ದಾಳಿಂಬೆ ನಾಟಿ ಮಾಡಿದ್ದೇವೆ. ವೈರಸ್‌ನಿಂದ ರಕ್ಷಣೆ ಮಾಡಿಕೊಳ್ಳಲು ಹರಸಾಹಸಪಡಬೇಕು. ಮೂರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇವೆ’ ಎಂದು ಅವರು ಹೇಳಿದರು.

‘ಆಲಿಕಲ್ಲು ಮಳೆ ಬಿದ್ದ ಮಾರನೇ ದಿನವೇ ವೈರಸ್ ಆವರಿಸಿಕೊಂಡಿತ್ತು. ಒಂದು ಬಾರಿ ತೋಟಕ್ಕೆ ಔಷಧಿ ಸಿಂಪಡಣೆ ಮಾಡಬೇಕಾದರೆ ₹ 15 ಸಾವಿರ ಬೇಕು. ಒಂದು ತಿಂಗಳಲ್ಲಿ 5 ಬಾರಿ ಸಿಂಪಡಣೆ ಮಾಡಬೇಕು. ಕಷ್ಟಪಟ್ಟು ವೈರಸ್‌ನಿಂದ ತೋಟ ಕಾಪಾಡಿಕೊಂಡು ಉತ್ತಮ ಇಳುವರಿಯ ಬೆಳೆ ಬೆಳೆದರೂ ಖರೀದಿಸುವವರು ಇಲ್ಲವಾಗಿದ್ದಾರೆ’ ಎಂದರು.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 100 ಬೆಲೆಯಿದ್ದರೂ ತೋಟದಲ್ಲಿ ಕೇಳುವವರಿಲ್ಲವಾಗಿದೆ. ಸುತ್ತಮುತ್ತಲಿನಲ್ಲಿರುವ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಬೇಕಾಗಿದೆ. ಅವರು ಕೇಳಿದ ಬೆಲೆಗೆ ಕೊಡಬೇಕು. ಯಲಹಂಕದ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅವರು ಒಂದು ಕೆ.ಜಿ.ದಾಳಿಂಬೆಯನ್ನು ₹ 40ಕ್ಕೆ ಕೇಳುತ್ತಾರೆ. ಬಂಡಿಗಳಲ್ಲಿ ನಾವು ಖರೀದಿಗೆ ಹೋದರೆ ₹ 120 ಹೇಳುತ್ತಾರೆ. ನಮ್ಮಿಂದ ಖರೀದಿ ಮಾಡಿಕೊಂಡು ಹೋದರೂ ಸಕಾಲದಲ್ಲಿ ಹಣ ಕೊಡುವುದಿಲ್ಲ. ನಾವು ವಿನಾಕಾರಣ ಸುತ್ತಾಡಬೇಕು. ಸರ್ಕಾರ ನಮಗೆ ಸಹಾಯಧನ ಕೊಡುವುದೇ ಬೇಡ. ನಾವು ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಸಾಕು’ ಎಂದರು.

ರೈತ ಮಹೇಶ್ ಮಾತನಾಡಿ, ‘ತೋಟಗಳಲ್ಲಿ ಕಷ್ಟಪಟ್ಟು ಬೆಳೆ ಬೆಳೆಯುವ ರೈತರಿಗಿಂತಲೂ ರೈತರಿಂದ ಖರೀದಿ ಮಾಡಿಕೊಂಡು ಮಾರುಕಟ್ಟೆಗೆ ತಲುಪಿಸುವ ಮಧ್ಯವರ್ತಿಗಳೇ ಚೆನ್ನಾಗಿದ್ದಾರೆ. ರೈತರು ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಖರೀದಿ ಮಾಡುವುದಿಲ್ಲ. ಮದ್ಯವರ್ತಿಗಳ ಮುಖಾಂತರ ಹೋದರೆ ಮಾತ್ರವೇ ಖರೀದಿಸುತ್ತಾರೆ’ ಎಂದರು.

‘ಕೊಳವೆಬಾವಿಯಲ್ಲಿ ನೀರಿಲ್ಲದೆ ಟ್ಯಾಂಕರ್‌ನಲ್ಲಿ ನೀರು ಹಾಯಿಸಿ ಉತ್ತಮವಾಗಿ ಇಳುವರಿ ಬಂದಿದ್ದ ಬೆಳೆ ಕಟಾವಿನ ಹಂತದಲ್ಲಿ ಆವರಿಸಿಕೊಂಡ ವೈರಸ್‌ನಿಂದಾಗಿ ಸುಮಾರು 30 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸುವಂತಾಯಿತು. ಬೆಳೆಗೆ ಮಾಡಿಕೊಂಡಿದ್ದ ಸಾಲ ತೀರಿಸಲಾಗಿಲ್ಲ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಒತ್ತಾಯಿಸಿದರು.

Post Comments (+)