ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ಬೆಳಕಿಗೆ ಧ್ಯಾನ ರಹದಾರಿ

ರಾಜಾಪುರ ಸಂಸ್ಥಾನ ಮಠ: ಶ್ರದ್ಧಾ ಭಕ್ತಿಯ ಕಾರ್ತಿಕ ದೀಪೋತ್ಸವ
Last Updated 25 ನವೆಂಬರ್ 2022, 4:13 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ ರಾಜಾಪುರ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನೂರಾರು ಭಕ್ತರು ಪಾಲ್ಗೊಂಡು ದೀಪಗಳನ್ನು ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು.

ಸಾವಿರಾರು ಮಣ್ಣಿನ ಹಣತೆಗಳ ಬೆಳಕು ಮಠಕ್ಕೆ ಮೆರುಗು ನೀಡಿತ್ತು. ದ್ವಾದಶ ಲಿಂಗಗಳಿರುವ ಕಲ್ಯಾಣಿ, ಮಠದ ಆವರಣದಲ್ಲಿ ದೀಪಗಳ ಸಾಲು ಕತ್ತಲಿನಲ್ಲಿ ಬೆಳಕಿನ ವೈಭವವನ್ನು ಮೂಡಿಸಿತು.

ಕಾರ್ತಿಕ ದೀಪೋತ್ಸವದ ಅಂಗವಾಗಿ ಮಠದಲ್ಲಿನ ಕ್ಷೇತ್ರನಾಥ ವೀರಭದ್ರಸ್ವಾಮಿ, ರಾಜೇಶ್ವರ ಸ್ವಾಮಿ, ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ನಡೆಯಿತು. ವಿಶೇಷ ಅಲಂಕಾರ ಮಾಡಲಾಗಿತ್ತು. ಗಣಪತಿ, ರುದ್ರ, ಮೃತ್ಯುಂಜಯ, ನವಗ್ರಹ, ದುರ್ಗಾ ಹೋಮಗಳು ನಡೆದವು.

ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿನ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕು ಮೂಡಿಸಲು ಭಗವಂತನ ಧ್ಯಾನ, ಸ್ಮರಣೆ ಹಾಗೂ ಭಕ್ತಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ದೀಪ ಜ್ಞಾನದ ಸಂಕೇತವಾಗಿದೆ. ಸಮಾಜದ ಏಳಿಗೆಗಾಗಿ ದೇವಾಲಯ, ಮಠಗಳು ನಿರ್ಮಾಣವಾಗಿವೆ. ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ಮಠಗಳು ನಿರತವಾಗಿದ್ದು ಜನರಲ್ಲಿ ಮೌಲ್ಯಗಳನ್ನು ಬಿತ್ತುವ ಕೇಂದ್ರಗಳಾಗಿವೆ ಎಂದರು.

ಜನರು ಇತ್ತೀಚಿನ ದಿನಗಳಲ್ಲಿ ಧಾವಂತದಲ್ಲಿದ್ದು ತಾಳ್ಮೆ, ಸಂಯಮ ಕಳೆದುಕೊಂಡು ನೆಮ್ಮದಿಯಿಂದ ವಂಚಿತರಾಗಿದ್ದಾರೆ. ಹಾಗಾಗಿ, ಧರ್ಮದ ಬೆಳಕಿನಲ್ಲಿ ಸನ್ಮಾರ್ಗ ಕಂಡುಕೊಂಡು ನೆಮ್ಮದಿ, ಸಂತಸದಿಂದ ಜೀವನ ಸಾಗಿಸಿ ಮುಕ್ತಿ ಪಡೆಯಲು ಪ್ರಾರ್ಥನೆ, ಧ್ಯಾನ, ಪೂಜೆಯ ಅವಶ್ಯಕತೆ ಇದೆ ಎಂದು ತಿಳಿಸಿದರು.

ಆಧ್ಯಾತ್ಮಿಕ ಚಿಂತಕ ಆತ್ಮಾನಂದನಾಥ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಮಠಮಾನ್ಯಗಳ ಪಾತ್ರ ಪ್ರಮುಖವಾದುದು. 900 ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ರಾಜಾಪುರ ಸಂಸ್ಥಾನ ಮಠದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಗಳು ನಡೆಯುವಂತಾಗಲಿ ಎಂದು ಆಶಿಸಿದರು.

ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್‌. ಹೊನ್ನಾಂಬ, ಪಶು ಸಂಗೋಪನಾ ಇಲಾಖೆಯ ಆಯುಕ್ತ ಬಸವರಾಜೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್. ಬಸವರಾಜು, ಆನೇಕಲ್‌ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಜಯಣ್ಣ, ಹಾರಗದ್ದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ನಟರಾಜ್, ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಚಿನ್ನಪ್ಪ ವೈ. ಚಿಕ್ಕಹಾಗಡೆ, ಗ್ರಾಮ ಪಂಚಾಯಿತಿ ಸದಸ್ಯರಾದ ಕಾಂತರಾಜು, ಲಲಿತಾ ಗುರುದೇವ್‌, ಪುರಸಭಾ ಉಪಾಧ್ಯಕ್ಷೆ ಮಾಲಾ ಭಾರ್ಗವ್‌, ಮಾಜಿ ಸದಸ್ಯೆ ಮಂಜುಳ ನೀಲಕಂಠಯ್ಯ, ವಿಶ್ವ ವೀರಶೈವ ಮಹಾಮಂಡಳಿ ಅಧ್ಯಕ್ಷ ನಟರಾಜ್, ಮುಖಂಡರಾದ ಆರ್‌.ಎಸ್‌. ಪ್ರಕಾಶ್‌, ಹಿನ್ನಕ್ಕಿ ಜಯಣ್ಣ, ಪರಮಶಿವಯ್ಯ, ಎಚ್‌.ವಿ. ನಾಗರಾಜು, ಎಸ್‌.ಆರ್‌.ಎಸ್. ಚಂದ್ರಶೇಖರ್‌, ರಾಜಶೇಖರ್, ವೇದಮೂರ್ತಿ, ವಿಶ್ವನಾಥ್, ಅಂಬಿಕಾ, ಮಮತಾ, ಶಶಿಧರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT