ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಬಗೆರೆ ಹೋಬಳಿ ಉಳಿಸಿ ಹೋರಾಟಕ್ಕೆ ಸಿದ್ದತೆ

ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲು ಯೋಜನೆ–ನಾಳೆ ದೊಡ್ಡಬಳ್ಳಾಪುರದಲ್ಲಿ ಸಭೆ
Last Updated 12 ನವೆಂಬರ್ 2019, 19:46 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹೊಸದಾಗಿ ರಚನೆಯಾಗುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿ ಸೇರ್ಪಡೆ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಗುಪ್ತವಾಗಿ ಮಾಡಲು ಹೊರಟಿದೆ. ಸ್ಥಳೀಯರ ಅಭಿಪ್ರಾಯ, ಭೌಗೋಳಿಕ ಸಂಬಂಧವನ್ನೇ ಗಮನಿಸದೆ ಅವೈಜ್ಞಾನಿಕವಾಗಿ ಮಂಚೇನಹಳ್ಳಿ ತಾಲ್ಲೂಕಿಗೆ ತೂಬಗೆರೆ ಹೋಬಳಿಯನ್ನು ಸೇರ್ಪಡೆ ಮಾಡಲು ಹೊರಟಿರುವುದರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಸಿದ್ದತೆಗಳು ಅರಂಭಗೊಂಡಿವೆ.

ಹೋರಾಟವನ್ನು ಪಕ್ಷಾತೀತವಾಗಿ ನಡೆಸುವ ಮೂಲಕ ಯಶಸ್ಸಿಗೊಳಿಸಲು ತೂಬಗೆರೆ ಹಿತರಕ್ಷಣಾ ಹೋರಾಟ ಸಮಿತಿಯು ಅಸ್ಥಿತ್ವಕ್ಕೆ ಬಂದಿದೆ. ನ 14 ರಂದು ತೂಬಗೆರೆಯಲ್ಲಿ ಸಮಿತಿಯ ನೇತೃತ್ವದಲ್ಲಿ ಬೃಹತ್‌ ಸಭೆ ನಡೆಸುವ ಮೂಲಕ ಮುಂದಿನ ಹೋರಾಟದ ರೂಪುರೇಷೆಗಳು ಸಿದ್ದಗೊಳ್ಳುತ್ತಿವೆ.

2018ರ ಅಕ್ಟೋಬರ್‌ 4ರಂದೇ ಹೊಸ ತಾಲ್ಲೂಕು ರಚನೆಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಕಡತವನ್ನು ಸಿದ್ದಪಡಿಸಿ, ಕಂದಾಯ,ಕೃಷಿ,ತೋಟಗಾರಿಕೆ, ಪಂಚಾಯಿತ್‌ ರಾಜ್‌ ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿಗಳ ಸಂಗ್ರಹ ಆರಂಭಗೊಂಡಿದೆ. ಆದರೆ, ಹೊಸ ತಾಲ್ಲೂಕು ರಚನೆ ವಿಷಯ ಈಗ ಚಿಕ್ಕಬಳ್ಳಾಪುರ ವಿಧಾನಸಭಾ ಉಪಚುನಾವಣೆಯಿಂದಾಗಿ ಮುನ್ನಲೆಗೆ ಬಂದಿದ್ದು, ಹೊಸ ತಾಲ್ಲೂಕು ರಚನೆಯ ಸಾಧಕ, ಬಾಧಕ, ಭೌಗೋಳಿಕ ವಿಷಯ ಮಾತ್ರ ಗೌಣವಾಗಿ ರಾಜಕೀಯ ಕೆಸರೆರಚಾಟಕ್ಕೆ ದಾರಿಯಾಗಿದೆ.

ತೂಬಗೆರೆ ಹೋಬಳಿಯನ್ನು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಿರುವುದೇ ಅವೈಜ್ಞಾನಿಕವಾಗಿದೆ. ಮತ ಹಾಕುವುದು ದೇವನಹಳ್ಳಿ ಕ್ಷೇತ್ರದ ಶಾಸಕರಿಗೆ, ಸರ್ಕಾರಿ ಕೆಲಸಗಳಿಗಾಗಿ ದೊಡ್ಡಬಳ್ಳಾಪುರಕ್ಕೆ ಹೋಗುವಂತಾಗಿದೆ. ಇದರಿಂದಾಗಿ ತೂಬಗೆರೆ ಹೋಬಳಿಯ ಜನರ ಕೆಲಸಗಳೆಂದರೆ ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿಗಳಿಗೆ ಉದಾಸೀನವಾಗಿದೆ. ತೂಬಗೆರೆ ಹೋಬಳಿಯ ಜನರೆಂದರೆ ಎಲ್ಲದರಲ್ಲೂ ಮಲತಾಯಿ ದೋರಣೆಯಾಗಿದೆ ಎನ್ನುತ್ತಾರೆ ರಾಜ್ಯ ರೈತ ಸಂಘದ ಮುಖಂಡ ಬಚ್ಚಹಳ್ಳಿ ಸತೀಶ್‌.

ತೂಬಗೆರೆ ಹೋಬಳಿ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಜೀವ ಸೆಲೆಯಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ಜಕ್ಕಲಮೊಡಗು ಜಲಾಶಯ ಇರುವುದೇ ತೂಬಗೆರೆ ಹೋಬಳಿಯಲ್ಲಿ. ಈ ಜಲಾಶಯ ನಮ್ಮ ತಾಲ್ಲೂಕಿನಲ್ಲಿದೆ. ಹೀಗಾಗಿ ಅರ್ಧ ಭಾಗದಷ್ಟು ನೀರು ನಮ್ಮ ನಗರಕ್ಕೆ ಬೇಕು ಎನ್ನುವ ವಾದವನ್ನು ಮಂಡಿಸಲಾಗುತ್ತಿದೆ.

ತೂಬಗೆರೆ ಹೋಬಳಿಯೇ ಇಲ್ಲವಾದ ಮೇಲೆ ಜಲಾಶಯ ನಮ್ಮ ತಾಲ್ಲೂಕಿನಲ್ಲಿದೆ ಎಂದು ನಮ್ಮ ಹಕ್ಕು ಪ್ರತಿಪಾಧಿಸುವ ಅವಕಾಶವನ್ನೇ ಕಳೆದುಕೊಳ್ಳುವ ಆತಂಕವು ಎದುರಾಗಿದೆ. ಹೀಗಾಗಿ ನಗರದ ಜನರು ಸಹ ತೂಬಗೆರೆ ಹೋಬಳಿಯನ್ನು ನಮ್ಮ ಜಿಲ್ಲೆ, ನಮ್ಮ ತಾಲ್ಲೂಕಿನಲ್ಲೇ ಉಳಿಸಿಕೊಳ್ಳಲು ನಡೆಸುವ ಹೋರಾಟದಲ್ಲಿ ಸಕ್ರಿಯಾಗಿ ಭಾಗವಹಿಸಬೇಕು ಎನ್ನುತ್ತಾರೆ ತೂಬಗೆರೆ ಹಿತರಕ್ಷಣ ಹೋರಾಟ ಸಮಿತಿಯ ಮುಖಂಡರು.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 29 ಗ್ರಾಮ ಪಂಚಾಯಿತಿಗಳು ಇವೆ. ಇವುಗಳ ಪೈಕಿ 7 ಗ್ರಾಮ ಪಂಚಾಯಿತಿಗಳು ಪೂರ್ಣ ಹಾಗೂ 2 ಗ್ರಾಮ ಪಂಚಾಯಿತಿಗಳ ಅರ್ಧ ಭಾಗದಷ್ಟು ಗ್ರಾಮಗಳು ಹೊಸದಾಗಿ ರಚನೆಯಾಗುತ್ತಿರುವ ಮಂಚೇನಹಳ್ಳಿಗೆ ಸೇರ್ಪಡೆಯಾಗಲಿವೆ.

ದಕ್ಷಿಣ ಭಾರತದಲ್ಲೇ ಬಮೂಲ್‌(ಬೆಂಗಳೂರು ಹಾಲು ಒಕ್ಕೂಟ) ರೈತರಿಗೆ ಹೆಚ್ಚಿನ ದರವನ್ನು ನೀಡಿ ಹಾಲು ಖರೀದಿಸುತ್ತಿದೆ. ತೂಬಗೆರೆ ಹೋಬಳಿಯ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರ್ಪಡೆಯಾದರೆ (ಕೊಚಿಮುಲ್)ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯಾಪ್ತಿಗೆ ಬರಲಿದೆ. ಇಲ್ಲಿನ ಹಾಲಿನ ದರ ಸೇರಿದಂತೆ ಹಾಲು ಉತ್ಪಾದಕರಿಗೆ ದೊರೆಯುತ್ತಿರುವ ಎಲ್ಲಾ ರೀತಿಯ ಸೌಲಭ್ಯಗಳು ಬಮೂಲ್‌ಗಿಂತಲು ಕಡಿಮೆ ಇವೆ. ಈ ಸೌಲಭ್ಯಗಳಿಂದ ರೈತರು ವಂಚಿತರಾಗಲಿದ್ದಾರೆ ಎನ್ನುವ ವಾದವನ್ನು ರೈತ ಮುಖಂಡರು ಮುಂದಿಡುತ್ತಿದ್ದಾರೆ.

ಇವಷ್ಟೇ ಅಲ್ಲದೆ ಕೃಷಿ ಭೂಮಿಯ ಸರ್ಕಾರಿ ಮಾರುಕಟ್ಟೆ ಮೌಲ್ಯ, ಸರ್ಕಾರದ ಸೌಲಭ್ಯಗಳು ಸೇರಿದಂತೆ ಇನ್ನು ಅನೇಕ ರೀತಿಯ ಅನುಕೂಲಗಳಿಂದ ತೂಬಗೆರೆ ಹೋಬಳಿಯ ಜನರು ವಂಚನೆಗೆ ಒಳಗಾಗುವ ಅಪಾಯಗಳು ಇವೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ನಮ್ಮ ಹೋಬಳಿಯನ್ನು ಉಳಿಸಿಕೊಳ್ಳಲು ಪಕ್ಷಾತೀತ ಹೋರಾಟ ಅನಿವಾರ್ಯವಾಗಿದೆ ಎನ್ನುವ ವಾದದೊಂದಿಗೆ ನ 14 ರಂದು ಹೋರಾಟಕ್ಕೆ ಅಣಿಗೊಳ್ಳುವ ಐತಿಹಾಸಿಕ ಸಿದ್ದತೆಯ ಸಭೆಯನ್ನು ತೂಬಗೆರೆ ಗ್ರಾಮದಲ್ಲಿ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT