ಭಾನುವಾರ, ಜೂನ್ 26, 2022
29 °C

ಜನರ ಸಮಸ್ಯೆ ಆಲಿಸಿದ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಜನರು ಪಂಚಾಯಿತಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳುವ ಮೊದಲೇ ನಾವೇ ಜನರ ಬಳಿಗೆ ಹೋಗಿ ಸಮಸ್ಯೆಗಳನ್ನು ಆಲಿಸಬೇಕು. ಅವರ ಸಮಸ್ಯೆಗಳನ್ನು ನೇರವಾಗಿ ವೀಕ್ಷಣೆ ಮಾಡಲು ಅವಕಾಶ ಸಿಗುವುದರ ಜೊತೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ’ ಎಂದು ಯಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೊಣ್ಣೇಗೌಡ ತಿಳಿಸಿದರು.

ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಮದಲ್ಲಿ ಬುಧವಾರ ಉಪಾಧ್ಯಕ್ಷೆ ಪವಿತ್ರಾ ಸೋಮಶೇಖರ್ ಸೇರಿದಂತೆ ಸದಸ್ಯರೊಟ್ಟಿಗೆ ಗ್ರಾಮ ಪ್ರದಕ್ಷಿಣೆ ಮಾಡಿದ ಅವರು, ಗ್ರಾಮದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವೀಕ್ಷಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎನ್ನುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದಿಂದ ನಾವು ಪ್ರೇರಣೆಯಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಿಗೆ ನೇರವಾಗಿ ತೆರಳಿ ಸಮಸ್ಯೆಗಳನ್ನು ಯಾಕೆ ಆಲಿಸಬಾರದು ಎನ್ನುವ ಆಲೋಚನೆ ಬಂದಿದೆ. ಆಯಾ ಹಳ್ಳಿಯ ಸದಸ್ಯರು ಹಾಗೂ ಅಧಿಕಾರಿಗಳ ತಂಡದೊಂದಿಗೆ ತೆರಳಿ, ಸ್ಥಳೀಯ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಣೆ ಮಾಡುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು, ಬೀದಿದೀಪ ನಿರ್ವಹಣೆಗೆ ಮೊದಲ ಆಧ್ಯತೆ ನೀಡಲಾಗುವುದು. ಮೊದಲು ಸ್ವಚ್ಛವಾದ ಪಂಚಾಯಿತಿಯನ್ನಾಗಿ ಮಾಡಲು ನಾವು ಮುಂದಾಗಿದ್ದೇವೆ. ನಮ್ಮ ಪ್ರಯತ್ನಕ್ಕೆ ಜನರು ಹೆಚ್ಚಿನ ಸಹಕಾರ ನೀಡಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಾಗಿದೆ ಎಂದು ಹೇಳಿದರು.

ಸದಸ್ಯ ಆನಂದ್ ಮಾತನಾಡಿ, ಗ್ರಾಮದಲ್ಲಿ ರಾಜಕಾಲುವೆ, ಚರಂಡಿಗಳು ಹದಗೆಟ್ಟಿವೆ. ಸ್ವಚ್ಛತೆಯಿಲ್ಲದೆ ಜನರು ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಿದ್ದಾರೆ. ಈಗ ಬೇಸಿಗೆ ಆರಂಭವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಮುಂಚೆ ಪ್ರತಿಯೊಂದು ಚರಂಡಿಗೂ ಬ್ಲೀಚಿಂಗ್ ಸಿಂಪಡಣೆ ಮಾಡಬೇಕು. ಚರಂಡಿಗಳಲ್ಲಿ ತುಂಬಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ನರೇಗಾ ಯೋಜನೆಯಡಿ ಅವಶ್ಯವಿರುವ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ನಮ್ಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡಲು ಪಣತೊಟ್ಟಿದ್ದೇವೆ. ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ಅಧಿಕಾರಿಗಳು ಹಾಗೂ ಜನರ ಸ್ಪಂದಿಸಬೇಕು ಎಂದು ಕೋರಿದರು.

ಗ್ರಾಮ ಪಂಚಾಯಿತಿ ಸದಸ್ಯೆ ರೂಪಾ ಚಿಕ್ಕಣ್ಣ ಮಾತನಾಡಿ, ಜನರು ನಮಗೆ ಮತ ಕೊಟ್ಟು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುವುದು ನಮ್ಮ ಕರ್ತವ್ಯ. 5 ವರ್ಷಗಳಲ್ಲಿ ನಮ್ಮ ಶಕ್ತಿ ಮೀರಿ, ಪಕ್ಷಭೇದ ಮರೆತು ಅಭಿವೃದ್ಧಿಯ ಕಡಗೆ ಚಿಂತನೆ ನಡೆಸುತ್ತೇವೆ ಎಂದರು.

ಕರ ವಸೂಲಿಗೆ ಆದ್ಯತೆ: ಪಂಚಾಯಿತಿಗೆ ಬರಬೇಕಾಗಿರುವ ಆದಾಯ ಕುಂಠಿತವಾಗಿದೆ. ಜನರು ಸ್ವಯಂ‌ಪ್ರೇರಿತರಾಗಿ ಬಂದು ತೆರಿಗೆ ಕಟ್ಟುತ್ತಿಲ್ಲ. ನಮ್ಮಲ್ಲಿ ಕರ ವಸೂಲಿಗಾರ ಇಲ್ಲದೆ ಇರುವ ಕಾರಣ ಸರ್ಕಾರದ ನಿಯಮಾವಳಿಯಂತೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಕರ ವಸೂಲಿಗಾರನನ್ನು ನೇಮಕ ಮಾಡಿಕೊಂಡು ತೆರಿಗೆ ಸಂಗ್ರಹಣೆಗೆ ಆದ್ಯತೆ ನೀಡಲಾಗುತ್ತದೆ ಎಂದು ಉಪಾಧ್ಯಕ್ಷೆ ಪವಿತ್ರಾ ಸೋಮಶೇಖರ್ ತಿಳಿಸಿದರು. 

ಗ್ರಾಮಸ್ಥರ ಬೇಸರ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬದ್ಧತೆಯಿಂದ ಕೆಲಸ ಮಾಡದಿರುವ ಕಾರಣ ಸಮಸ್ಯೆಗಳು ಹೆಚ್ಚಾಗಿವೆ. 6 ತಿಂಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಬದಲಾವಣೆ ಮಾಡಿ ಅವರಿಗೆ ಮನಬಂದಂತೆ ಕೆಲಸ ಮಾಡಿಸಿದ್ದಾರೆ. ಇದರಿಂದ ತುರ್ತಾಗಿ ಆಗಬೇಕಾಗಿರುವ ಕೆಲಸಗಳು ಆಗಿಲ್ಲ. ಅವರು ಪಂಚಾಯಿತಿಗೂ ಸರಿಯಾಗಿ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ನೇತ್ರಾವತಿ ಮಂಜುನಾಥ್, ಸುನಿಲ್, ಲಕ್ಷ್ಮಮ್ಮ, ಮುಖಂಡರಾದ ಹನುಮಪ್ಪ, ಕೃಷ್ಣಪ್ಪ, ವೈ.ಸಿ. ಶ್ರೀನಿವಾಸ್, ಕಾರ್ಯದರ್ಶಿ ಮೋಹನ್ ಕುಮಾರ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು