ಪುರಸಭೆ ಮುಂದೆ ವ್ಯಾಪಾರಿಗಳ ಪ್ರತಿಭಟನೆ

7
ಬಸ್ ನಿಲ್ದಾಣದಲ್ಲಿ ಅಂಗಡಿ ಇಡಲು ಅವಕಾಶ ನೀಡಬಾರದೆಂದು ಒತ್ತಾಯ

ಪುರಸಭೆ ಮುಂದೆ ವ್ಯಾಪಾರಿಗಳ ಪ್ರತಿಭಟನೆ

Published:
Updated:
Deccan Herald

ವಿಜಯಪುರ: ಬಸ್ ನಿಲ್ದಾಣದಲ್ಲಿ ಅಂಗಡಿ ಇಟ್ಟುಕೊಳ್ಳಲು ಪುರಸಭೆಯವರೇ ಅನುಮತಿ ನೀಡುವ ಮೂಲಕ ನಮ್ಮ ವ್ಯಾಪಾರ ವಹಿವಾಟುಗಳಿಗೆ ತೊಂದರೆ ಮಾಡುತ್ತಿದ್ದಾರೆ’ ಎಂದು ಬಸ್ ನಿಲ್ದಾಣದಲ್ಲಿನ ಕೆಲ ವ್ಯಾಪಾರಿಗಳು ಪುರಸಭೆಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಬಸ್ ನಿಲ್ದಾಣದಲ್ಲಿರುವ ಪುರಸಭೆಯ ಅಂಗಡಿಗಳಿಗೆ ಹರಾಜಿನ ಮೂಲಕ ಲಕ್ಷಾಂತರ ರೂಪಾಯಿ ಹಣ ಠೇವಣಿ ಮಾಡಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಕಟ್ಟುತ್ತಿದ್ದೇವೆ. ಹೀಗಿದ್ದರೂ ಪುರಸಭೆಯವರು ಏಕಾಏಕಿ ಖಾಸಗಿ ವ್ಯಕ್ತಿಯೊಬ್ಬರಿಗೆ ಅಂಗಡಿ ಇಟ್ಟುಕೊಳ್ಳಲು ಮೌಖಿಕ ಆದೇಶ ನೀಡಿ ರಾತ್ರೋ ರಾತ್ರಿ ಅಂಗಡಿ ಇಡುವಂತೆ ಮಾಡಿದ್ದಾರೆ. ಇದರಿಂದ ನಮ್ಮ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಅಂಗಡಿಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ಜಾಮೀಯಾ ಮಸೀದಿ ಅಧ್ಯಕ್ಷ ಹನೀಪುಲ್ಲಾ ಮಾತನಾಡಿ, ‘ಅಧಿಕೃತವಾಗಿ ಅಂಗಡಿ ಇಡುವುದಕ್ಕೆ ಆದೇಶವಿದ್ದರೆ ಇಟ್ಟುಕೊಳ್ಳಲಿ. ಆದರೆ ಬೇರೊಬ್ಬರಿಗೆ ಏಕಾಏಕಿ ಅನುಮತಿ ನೀಡಿ ವ್ಯಾಪಾರಸ್ಥರಿಗೆ ತೊಂದರೆ ಕೊಡಬಾರದು‘ ಎಂದು ತಾಕೀತು ಮಾಡಿದರು.

ಪುರಸಭಾ ಸದಸ್ಯ ಎಂ.ನಾಗರಾಜ್ ಮಾತನಾಡಿ, ’ನಾನು 16 ನೇ ವಾರ್ಡಿನ ಸದಸ್ಯ ಕನಿಷ್ಠ ನನ್ನ ಗಮನಕ್ಕೂ ತಾರದೆ ಏಕಾಏಕಿ ಅಂಗಡಿಗೆ ಇಡಲು ಅವಕಾಶ ನೀಡಿದ್ದಾರೆ. ಇದು ಬಸ್ ನಿಲ್ದಾಣದಲ್ಲಿ ಮತ್ತಷ್ಟು ಅನಧಿಕೃತ ಅಂಗಡಿಗಳು ತಲೆ ಎತ್ತಲಿಕ್ಕೆ ನಾವೇ ಅವಕಾಶ ಮಾಡಿಕೊಟ್ಟಂತೆ. ಈ ರೀತಿ ಮಾಡುವುದು ಸರಿಯಲ್ಲ. ಸದಸ್ಯರು ಲಂಚ ತೆಗೆದುಕೊಂಡು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪಗಳು ನನ್ನ ಮೇಲೆ ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಅವಕಾಶ ಕೊಡಬೇಡಿ‘ ಎಂದರು.

6ನೇ ವಾರ್ಡಿನ ಸದಸ್ಯ ಆರ್.ಸಿ.ಮಂಜುನಾಥ್ ಮಾತನಾಡಿ, ‘ಎಲ್ಲರೂ ಜೀವನ ರೂಪಿಸಿಕೊಳ್ಳಬೇಕೆಂದು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದಾರೆ. ಅವರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸೂಕ್ತವಾದ ಜಾಗವನ್ನು ಹುಡುಕಿಕೊಡಿ ಅದನ್ನು ಬಿಟ್ಟು ಬಸ್ ನಿಲ್ದಾಣದಲ್ಲೇ ಕೊಡಬೇಕು ಎನ್ನುವುದು ಬೇಡ. ನಾಗರಿಕರ ಹಿತಾಸಕ್ತಿಗೆ ದಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘ನಾವು ಯಾವ ಖಾಸಗಿ ವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿಲ್ಲ.  ಕೋಚಿಮೂಲ್‌ (ಸರ್ಕಾರದ ಅಂಗ ಸಂಸ್ಥೆ) ಹಾಲಿನ ಮಾರಾಟ ಮಳಿಗೆಗೆ ಅವಕಾಶ ಕೋರಿ ಪತ್ರ ಬಂದಿತ್ತು. ಅದರಂತೆ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಬಸ್ ನಿಲ್ದಾಣದಲ್ಲಿ 10x10 ಅಳತೆಯಲ್ಲಿ ಜಾಗವನ್ನು ಕೊಡಲಿಕ್ಕೆ ಒಪ್ಪಿಗೆ ನೀಡಿದ್ದೇವೆ‘ ಎಂದರು. 

’ಕೃಷ್ಣಮೂರ್ತಿ ಎಂಬುವವರಿಂದ ಠೇವಣಿ ಹಾಗೂ ಒಂದು ತಿಂಗಳ ಬಾಡಿಗೆಯನ್ನೂ ಕಟ್ಟಿಸಿಕೊಂಡಿದ್ದೇವೆ. ಆದರೆ, ಆದೇಶವನ್ನು ಇನ್ನೂ ಕೊಟ್ಟಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಒಂದು ತಿಂಗಳ ಹಿಂದೆ ಬಸ್ ನಿಲ್ದಾಣದಲ್ಲಿ ಇದ್ದ ಪೆಟ್ಟಿ ಅಂಗಡಿಯನ್ನು ತೆರವುಗೊಳಿಸಿದ್ದೇವೆ. ಜಿಲ್ಲಾಧಿಕಾರಿ ಅನುಮತಿ ಮೇರೆಗೆ ತಾತ್ಕಾಲಿಕವಾಗಿ ಬಸ್ ನಿಲ್ದಾಣದ ಸಮೀಪದಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದರೆ ಅಂಗಡಿ ತೆರವುಗೊಳಿಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !