ಸೋಮವಾರ, ಮಾರ್ಚ್ 1, 2021
24 °C
ನಲ್ಲೂರು ಮಾರುತಿ ಪ್ರೌಢಶಾಲೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

‘ದೇಶ ಕಾಯುವ ಯೋಧರೇ ಹಿರೋಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ದೇಶ ಕಾಯುವ ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ, ಅವರಂತೆ ಸಮರ್ಪಣಾ ಮನೋಭಾವದಿಂದ ದೇಶ ಸೇವೆಗೆ ಹೋಗಲಿಕ್ಕೆ ಯುವ ಮನಸ್ಸುಗಳು ಸಿದ್ಧಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಹೇಳಿದರು.

ಸಮೀಪದ ನಲ್ಲೂರು ಮಾರುತಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ನಿವೃತ್ತ ಯೋಧ ಅಶ್ವಥ್ಥನಾರಾಯಣ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ನಮ್ಮಲ್ಲಿರುವ ಸೈನಿಕರು, ನಮಗೆ ಜನ್ಮ ಕೊಟ್ಟ ತಂದೆ ತಾಯಿಗಳು ನಮಗೆ ಹಿರೋಗಳಾಗಬೇಕು. ಪರದೆಯ ಮೇಲೆ ನಟನೆ ಮಾಡುವವರು ನಮಗೆ ಹೀರೋಗಳಾಗಬಾರದು. ನಮ್ಮ ದೇಶ ಕಾಯುವ ಯೋಧರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಗಡಿ ಕಾಯುತ್ತಾರೆ. ಇಂತಹ ಸೇವೆ ಮಾಡುವುದು ಪುಣ್ಯದ ಕೆಲಸ. ಅವರನ್ನು ಎಲ್ಲರೂ ಹಿಂಬಾಲಿಸಬೇಕು. ಅವರ ಮಾರ್ಗದರ್ಶನ ಪಡೆಯಬೇಕು’ ಎಂದರು.

‘ನಿವೃತ್ತ ಯೋಧರು ತಮ್ಮ ಕರ್ತವ್ಯ ಮುಕ್ತಾಯವಾಯಿತು ಎಂದು ಸುಮ್ಮನಿರದೆ, ನೀವು ಕಲಿತಿರುವ ವಿದ್ಯೆಯನ್ನು ಅವಕಾಶವಿದ್ದರೆ ಶಾಲಾ ಮಕ್ಕಳಿಗೆ ಧಾರೆಯೆರೆಯಬೇಕು’ ಎಂದರು.

‘ಅವರೂ ಸೇನೆಗೆ ಸೇರುವಂತಹ ಉತ್ಸಾಹ ಗಳಿಸಿಕೊಳ್ಳುವಂತಹ ಅವಕಾಶಗಳು ಇರುತ್ತವೆ. ದೇಶ ಸೇವೆಗೆ ಮಾನಸಿಕವಾಗಿ, ದೈಹಿಕವಾಗಿ ಹೇಗೆ ಸಿದ್ಧಗೊಳ್ಳಬೇಕು ಎಂದು ಕಲಿಯಲಿಕ್ಕೆ ಅವರಿಗೆ ಸಾಧ್ಯವಾಗಲಿದೆ. ತಮ್ಮ ಬಿಡುವಿನ ಸಮಯದಲ್ಲಿ ಶಾಲೆಗಳಿಗೆ ಹೋಗಿ ಅವರನ್ನು ತರಬೇತುಗೊಳಿಸಬಹುದು’ ಎಂದರು.

ಸನ್ಮಾನಿತ ಅಶ್ವಥನಾರಾಯಣ ಮಾತನಾಡಿ, ‘ಶಾಲಾ ಮಕ್ಕಳು ಕಲಿಯುವ ಪ್ರತಿಯೊಂದು ಅಂಶಗಳು ಈ ದೇಶದ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಸಂರಕ್ಷಣೆ ಮಾಡಲಿಕ್ಕೆ ಉಪಯೋಗಕ್ಕೆ ಬರಲಿದೆ. ಶೈಕ್ಷಣಿಕ ಹಂತದಲ್ಲಿ ಈ ದೇಶವನ್ನು ಕಟ್ಟುವಂತಹ ಕನಸು ಕಾಣಬೇಕು, ಎಂಜಿನಿಯರ್, ವಕೀಲ ವೃತ್ತಿ, ವೈದ್ಯ ವೃತ್ತಿ, ಇವೆಲ್ಲವೂ ದೇಶಕ್ಕಾಗಿಯೇ ಕೆಲಸ ಮಾಡುತ್ತಿವೆ’ ಎಂದರು.

‘ಇವುಗಳಲ್ಲಿ ಒಂದಾಗಿರುವ ಸೇನೆಯು ಕೂಡಾ ಕೆಲಸ ಮಾಡುತ್ತಿದೆ. ಇದನ್ನೂ ಹೊರತುಪಡಿಸಿ, ಪ್ರತಿಯೊಬ್ಬ ಕಾರ್ಮಿಕರು ಈ ದೇಶದ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿದ್ದಾರೆ. ಅವರ ಬೆವರಿನ ಹನಿಗಳನ್ನು ಸುರಿಸಿ ಅನ್ನ ನೀಡುತ್ತಿರುವ ರೈತರೂ ಕೂಡಾ ತಮಗೆ ಎದುರಾಗುವಂತಹ ಎಲ್ಲ ದುಷ್ಪರಿಣಾಮಗಳನ್ನು ಎದುರಿಸಿ ಅನ್ನ ನೀಡುತ್ತಿದ್ದಾರೆ’ ಎಂದರು.

ಮಾಜಿ ಕರ್ನಲ್ ರಾಮದಾಸ್ ಮಾತನಾಡಿ, ‘ದೇಶ ಸೇವೆ ಮಾಡುವುದು ಕೇವಲ ಸೇನೆಯಿಂದ ಅಲ್ಲ. ಎಲ್ಲ ರೀತಿಯಲ್ಲೂ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸೇನೆಗೆ ಸೇರಿದರೆ ದೇಶ ಕಾಯುವ ಗುರಿ ಇರುತ್ತದೆ. ಜೀವದ ಮೇಲೆ ಆಸೆಯನ್ನು ಬಿಡಬೇಕು. ಯಾವ  ಸಂದರ್ಭದಲ್ಲಿ ಏನಾಗುತ್ತದೆ ಎಂಬುದನ್ನು ಹೇಳುವುದಕ್ಕಾಗುವುದಿಲ್ಲ. ಈ ಸೇವೆ ಮಾಡುವುದು ನಮಗೆ ಒಲಿದು ಬಂದ ಭಾಗ್ಯ. ಮಕ್ಕಳೂ ಸಹ ಸೇರಬೇಕೆಂದು ಬಯಸಿದರೆ ಎಲ್ಲಾ ರೀತಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಕೆಲಸಕ್ಕೆ ಸೇರಿ ದೇಶಕ್ಕೆ ಹೆಸರು ತರುವಂತಹ ಕೆಲಸ ಮಾಡಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ ಕೆಂಪೇಗೌಡ, ನಿವೃತ್ತ ಯೋಧ ರಾಮಚಂದ್ರ, ಗೃಹರಕ್ಷಕ ದಳದ ಅಧಿಕಾರಿ ರವೀಂದ್ರ, ಯಲಹಂಕ ಪೊಲೀಸ್ ಸಿಬ್ಬಂದಿ ಪರಮೇಶ್, ಶಾಲಾ ಮುಖ್ಯ ಶಿಕ್ಷಕ ವೈ.ಎನ್. ಕೃಷ್ಣಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.