ಹಾಲು ಉತ್ಪಾದಕರ ಸಂಘ: ಗ್ರಾಮೀಣರ ಜೀವನಾಡಿ

7

ಹಾಲು ಉತ್ಪಾದಕರ ಸಂಘ: ಗ್ರಾಮೀಣರ ಜೀವನಾಡಿ

Published:
Updated:
Prajavani

ವಿಜಯಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಭಾಗದ ಜೀವನಾಡಿಗಳು.  ಸಂಘಗಳನ್ನು ಲಾಭದಾಯಕವಾಗಿ ಬೆಳೆಸಿದಾಗ ನಿರುದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಅಭಿಪ್ರಾಯಪಟ್ಟರು.

ಚನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡಿದಾಗ ಮಾತ್ರವೇ ಸಂಘ ಅಭಿವೃದ್ಧಿಯತ್ತ ಸಾಗುವುದರ ಜೊತೆಗೆ ಉತ್ಪಾದಕರಿಗೂ ಸಿಗಬೇಕಾಗಿರುವ ಸೌಲಭ್ಯ ತಲುಪಲು ಸಾಧ್ಯವಾಗಲಿದೆ. ಹೈನೋದ್ಯಮದಲ್ಲಿ ಮಹಿಳೆಯರ ಪಾತ್ರವೂ ಮಹತ್ತರವಾಗಿದೆ. ಮನೆಗಳಲ್ಲಿ ರಾಸುಗಳ ಪಾಲನೆ ಮಾಡುವಂತಹ ಹೆಚ್ಚಿನ ಹೊಣೆಗಾರಿಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ನಿಭಾಯಿಸುತ್ತಿದ್ದಾರೆ. ಅವರ ಆರೋಗ್ಯ ಸುಧಾರಣೆಗೂ ಹಾಲಿನ ಒಕ್ಕೂಟ ಮುಂದಾಗಬೇಕು ಎಂದು ಹೇಳಿದರು.

ಡೇರಿಗಳ ಮುಖಾಂತರ ತಿಂಗಳಿಗೊಮ್ಮೆ ಹಾಲು ಉತ್ಪಾದಕರ ಆರೋಗ್ಯ ತಪಾಸಣಾ ಶಿಬಿರ ನಡೆಸುವಂತಹ ಕೆಲಸವಾಗಬೇಕು. ಒಕ್ಕೂಟ ಹಾಗೂ ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯ ಅರ್ಹರಿಗೆ ಸಿಗುವಂತೆ ಮಾಡುವ ಹೊಣೆಗಾರಿಕೆ ಸಿಬ್ಬಂದಿ ಮೇಲಿದೆ ಎಂದರು.

ದೇವನಹಳ್ಳಿ ಪುರಸಭಾ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಹೈನೋದ್ಯಮದಿಂದ ಆರ್ಥಿಕ ಅಭಿವೃದ್ಧಿಯತ್ತ ರೈತರು ಸಾಗಬೇಕು. ಉತ್ಪಾದಕರಿಗೆ ಲೀಟರ್ ಹಾಲಿಗೆ ಈಗ ನೀಡುತ್ತಿರುವ ₹24ನ್ನು ದ್ವಿಗುಣಗೊಳಿಸಬೇಕು. ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಜೀವನೋಪಾಯಕ್ಕಾಗಿ ಇರುವ ಈ ಉದ್ಯಮವನ್ನು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.

ಮುಖಂಡ ಹನುಮಂತಪ್ಪ ಮಾತನಾಡಿ, ರೈತರ ಪಾಲಿಗೆ ವರದಾನವಾಗಿರುವ ಹೈನೋದ್ಯಮ ಬೇಸಿಗೆಯಲ್ಲಿ ಕುಂಠಿತವಾಗದಂತೆ ಮುಂಜಾಗ್ರತೆ ವಹಿಸಬೇಕು. ಉತ್ಪಾದಕರು ರಾಸುಗಳ ಆರೋಗ್ಯ ಸುಧಾರಣೆಗೆ ಗಮನ ನೀಡಬೇಕು. ರಾಸುಗಳಿಗೂ ವಿಮೆ ಮಾಡಿಸಬೇಕು. ಕಾಲುಬಾಯಿ ರೋಗಬಾರದಂತೆ ಎಚ್ಚರಿ ವಹಿಸಿ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ಸಿ.ನಾರಾಯಣಸ್ವಾಮಿ, ಡೇರಿ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಮುದುಗುರ್ಕಿ ಆಂಜಿನಪ್ಪ, ವಿಜಯಪುರ ವೇಣು, ಹ್ಯಾಡ್ಯಾಳ ದೇವರಾಜ್, ಹರಳೂರು ಮುನಿಯಪ್ಪ, ನಾರಾಯಣಸ್ವಾಮಿ, ಅನಿಲ್ ಯಾದವ್, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !