6
ಹಿಂದಿನ ಬೆಲೆ ನೀಡಲು ಕರುನಾಡ ಗೋಪಾಲಕರ ಸಂಘದ ಆಗ್ರಹ

ಕಡಿಮೆ ಹಾಲಿನ ದರ– ಪ್ರತಿಭಟನೆ

Published:
Updated:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರುನಾಡ ಗೋಪಾಲಕರ ಸಂಘ ವತಿಯಿಂದ ಆನೇಕಲ್‌ ಶೀಥಲ ಕೇಂದ್ರದ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು

ಆನೇಕಲ್: ರೈತರಿಗೆ ನೀಡುವ ಹಾಲಿನ ದರ ಕಡಿಮೆ ಮಾಡಿರುವುದನ್ನು ಖಂಡಿಸಿ ಕರುನಾಡ ಗೋಪಾಲಕರ ಸಂಘದ ವತಿಯಿಂದ ಆನೇಕಲ್ ಶೀತಲ ಕೇಂದ್ರದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ‘ಬಮೂಲ್’ ಅಧ್ಯಕ್ಷ ಬಿ.ಜಿ. ಆಂಜಿನಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಘದ ಅಧ್ಯಕ್ಷ ರಮೇಶ್‌ ರೆಡ್ಡಿ ಮಾತನಾಡಿ, ರೈತರಿಗೆ ಹಾಲು ಒಕ್ಕೂಟ ನೀಡುವ ಹಾಲಿನ ದರವನ್ನು ಈಗ ಮೂರು ರೂಪಾಯಿ ಕಡಿಮೆ ಮಾಡಲಾಗಿದೆ. ರೈತರು ಹಾಲು ಉತ್ಪಾದನೆ ಮಾಡಲು ಹೆಚ್ಚಿನ ವೆಚ್ಚವಾಗುತ್ತದೆ. ಎಲ್ಲ ಬೆಲೆಗಳು ಹೆಚ್ಚಾಗುತ್ತಿದ್ದರೂ ರೈತರಿಗೆ ನೀಡುವ ಹಾಲಿನ ದರ ಕಡಿಮೆ ಮಾಡಿರುವುದು ಸರಿಯಲ್ಲ. ಕೂಡಲೇ ಬೆಲೆ ಕಡಿತ ಮಾಡಿರುವುದನ್ನು ನಿಲ್ಲಿಸಿ ಈ ಹಿಂದೆ ನೀಡುತ್ತಿದ್ದ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಹೊಂಪಲಘಟ್ಟ ಸತೀಶ್ ಮಾತನಾಡಿ, ‘ಬಿಸ್ಲೇರಿ ನೀರಿಗೂ ₹ 20 ನೀಡಲಾಗುತ್ತಿದೆ. ಹಾಲಿಗೂ ಈ ಬೆಲೆಯಾದರೆ ರೈತರು ಜೀವನ ಮಾಡುವುದು ದುಸ್ತರವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಾಲಿನ ಬೆಲೆಯನ್ನು ಕಡಿಮೆ ಮಾಡಬಾರದು ಎಂದು ಒತ್ತಾಯಿಸಿದರು.

ಒಕ್ಕೂಟದ ವತಿಯಿಂದ ಸರಬರಾಜು ಮಾಡುತ್ತಿರುವ ರಾಸುಗಳ ಮೇವನ್ನು ರಿಯಾಯಿತಿ ದರದಲ್ಲಿ ನೀಡಬೇಕು. ರಾಸುಗಳ ಮೇವಿನ ಬೆಲೆಯನ್ನು ಕಡಿಮೆ ಮಾಡಬೇಕು. ರೈತರಿಗೆ ನೀಡಲಾಗುತ್ತಿರುವ ವಿಮೆ ಮೊತ್ತ ₹ 1 ಲಕ್ಷ ಎಂದು ಪ್ರಚಾರ ಮಾಡಿದರೂ ₹ 70 ಸಾವಿರ ಮಾತ್ರ ಬಿಡುಗಡೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದರು.

‘ಬಮೂಲ್’ ಅಧ್ಯಕ್ಷ ಬಿ.ಜಿ.ಆಂಜಿನಪ್ಪ ಮಾತನಾಡಿ, ‘ಒಕ್ಕೂಟದ ವತಿಯಿಂದ ಸಾಧ್ಯವಾಗುವ ಬೇಡಿಕೆಗಳನ್ನು ಈಡೇರಿಸಲಾಗುವುದು. ಸರ್ಕಾರದ ವತಿಯಿಂದ ಕೈಗೊಳ್ಳಲಾಗುವ ಬೇಡಿಕೆಗಳ ಬಗ್ಗೆ ಸಂಬಂಧಿಸಿದ ಸಚಿವರು ಹಾಗೂ ಇಲಾಖೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿಮ್ಮೊಂದಿಗೆ ಇರುವೆ’ ಎಂದು ಭರವಸೆ ನೀಡಿದರು.

ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಶಂಕರ್, ಮುತ್ತರಾಯಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !