ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ವೇದಿಕೆಯಲ್ಲಿಯೇ ಮತ್ತೆ ಸಚಿವ, ಶಾಸಕ ಕಿತ್ತಾಟ!

ಕೊಳತೂರು ಗ್ರಾಮದಲ್ಲಿ ಆಸ್ಪತ್ರೆ ಭೂಮಿಪೂಜೆ ವೇಳೆ ರಾಜಕೀಯ ಜಟಾಪಟಿ
Last Updated 23 ನವೆಂಬರ್ 2022, 7:23 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ಜಡಗೇನಹಳ್ಳಿ ಹೋಬಳಿಯ ಕೊಳತೂರು ಗ್ರಾಮದಲ್ಲಿ ಮಂಗಳವಾರ ನಡೆದ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಭೂಮಿಪೂಜೆ ಕಾರ್ಯಕ್ರಮವು ರಾಜಕೀಯ ಕಿತ್ತಾಟಕ್ಕೆ ವೇದಿಕೆಯಾಯಿತು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಎದುರಿನಲ್ಲಿಯೇ ಆಸ್ಪತ್ರೆಯ ಭೂಮಿಪೂಜೆ ಕಾರ್ಯಕ್ರಮ ಈ ಘಟನೆಗೆ ಸಾಕ್ಷಿಯಾಯಿತು. ಆರಂಭದಲ್ಲಿಯೇ ಕಾರ್ಯಕ್ರಮವೂ ಗೊಂದಲದ ಗೂಡಾಯಿತು. ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಶಾಸಕ ಶರತ್ ಬಚ್ಚೇಗೌಡ ಮತ್ತು ಅವರ ಬೆಂಬಲಿಗರು ವೇದಿಕೆಯಲ್ಲಿ ಸಚಿವ ಸುಧಾಕರ್‌ ಮುಂದೆಯೇ ಅಸಮಾಧಾನ ಹೊರಹಾಕಿದರು. ಮತ್ತೊಂದೆಡೆ ಸಚಿವ ಎಂ.ಟಿ.ಬಿ. ಬೆಂಬಲಿಗರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕಾಗಿ ಎರಡು ರೀತಿಯ ಆಮಂತ್ರಣ ಪತ್ರಿಕೆ ಮುದ್ರಿತವಾಗಿದೆ. ಮೊದಲ ಪತ್ರಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೆಸರು ಹಾಕದೆ ನಗರಸಭೆ ಅಧ್ಯಕ್ಷರು ಮತ್ತು ಇತರರ ಹೆಸರು ಮುದ್ರಿಸಲಾಗಿದೆ ಎಂದು ಶರತ್‌ ಆಕ್ಷೇಪ ಎತ್ತಿದರು. ಶಾಸಕರ ಬೆಂಬಲಿಗರು ವೇದಿಕೆ ಏರಿದ್ದರಿಂದ ಅಲ್ಲಿ ನೂಕುನುಗ್ಗಲು ಉಂಟಾಯಿತು. ಕಾರ್ಯಕ್ರಮದುದ್ದಕ್ಕೂ ಬೆಂಬಲಿಗರು ಶಾಸಕರ ಪರವಾಗಿ ಘೋಷಣೆ ಕೂಗಿದರು. ಭಾಷಣದಲ್ಲಿ ಶಾಸಕರು ಮತ್ತು ಸಚಿವರು ಹೆಸರು ಹೇಳದೆ ಪರಸ್ಪರ ದೋಷಾರೋಪಣೆಗೆ ಇಳಿದರು.

ಸಚಿವ ಸುಧಾಕರ್‌ ಮಾತನಾಡಿ,‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ಎಲ್ಲರೂ ಸೇರಿ ತಾಲ್ಲೂಕಿನ ಜನರಿಗೆ ಬೇಕಾಗಿರುವ ಅವಶ್ಯಕತೆ ಪೂರೈಸಿ ಹೊಸಕೋಟೆಯನ್ನು ಮಾದರಿ ತಾಲ್ಲೂಕನ್ನಾಗಿ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ ಎಂದು ತಿಳಿಸಿದರು.

‘ತಾಲ್ಲೂಕಿನ ಅಭಿವೃದ್ಧಿಗೆ ತಾವು ವಿವಿಧ ಯೋಜನೆಯಡಿ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದೇನೆ. ಕೇವಲ ದುಡ್ಡು ಮಾಡಲು ಅಥವಾ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಅಂತಹ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.

‘ಸಂಪುಟ ದರ್ಜೆಯ ಸಚಿವರು ತಮ್ಮ ತಾಲ್ಲೂಕಿಗೆ ಎಷ್ಟು ಬೇಕಾದರೂ ಯೋಜನೆ ತರಬಹುದು. ಸರ್ಕಾರದಿಂದ ಸಾಕಷ್ಟು ಅನುದಾನವನ್ನೂ ಬಿಡುಗಡೆ ಮಾಡಿಸಬಹುದು. ಆದರೆ, ಅಂತಹ ಕಳಕಳಿ ಸಚಿವರಿಗೆ ಬೇಕಾಗಿದೆ. ಸಚಿವ ಸುಧಾಕರ್‌ ಸ್ವಕ್ಷೇತ್ರವಾದ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ’ ಎಂದುಅಧ್ಯಕ್ಷತೆ ವಹಿಸಿದ್ದ ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ತಾಲ್ಲೂಕಿಗೆ ಶಾಶ್ವತ ಯೋಜನೆಗಳ ಅಗತ್ಯವಿದೆ. ಸಚಿವ ಸುಧಾಕರ್‌ ಅವರು ತ್ವರಿತವಾಗಿ ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಕೋರಿದರು. ತಾಲ್ಲೂಕಿನ ಆರೋಗ್ಯ ಮತ್ತು ಶಿಕ್ಷಣದ ಅಭಿವೃದ್ಧಿಗೆ ಈ ಹಿಂದೆ ಸಚಿವರಾಗಿದ್ದ ಬಚ್ಚೇಗೌಡ ಮತ್ತು ಚಿಕ್ಕೇಗೌಡ ದುಡಿದಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ರೇವಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಶೀಲ್ದಾರ್‌ ಮಹೇಶ್ ಕುಮಾರ್‌, ಜಡಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಲ್ಲವಿ, ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT