ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ ನೀಡಿದ ರೈತರಿಗೆ ಸಮದಟ್ಟು ಭೂಮಿ ನೀಡಿ

ನೂತನ ಜಿಲ್ಲಾಡಳಿತ ಸಂಕೀರ್ಣದಲ್ಲಿಯೇ ಆಯುಧ ಪೂಜೆ ನಡೆಸಿ : ಸಚಿವ
Last Updated 15 ಅಕ್ಟೋಬರ್ 2018, 12:58 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಸ್ತುತ ತಾಲ್ಲೂಕಿನ ಚಪ್ಪರದ ಕಲ್ಲು ಬಳಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಸಂಕೀರ್ಣ ಕಟ್ಟಡದಲ್ಲೇ ಆಯಾ ಇಲಾಖೆಗಳು ಆಯುಧ ಪೂಜೆ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಸೋಮವಾರ ಜಿಲ್ಲಾಡಳಿತ ಸಂಕೀರ್ಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮತ್ತು ಸ್ಥಳಾಂತರಗೊಳ್ಳತ್ತಿರುವ ವಿವಿಧ ಇಲಾಖೆಗಳ ಬಗ್ಗೆ ಜಿಲ್ಲಾಧಿಕಾರಿ ಕರೀಗೌಡರಿಂದ ಮಾಹಿತಿ ಪಡೆದು ಮಾತನಾಡಿದರು.

ಜಿಲ್ಲಾಡಳಿತ ಸಂಕೀರ್ಣ ಕಚೇರಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂಬುದು ಸರಿಯಲ್ಲ. ಹಣ ಬಿಡುಗಡೆಯಾಗದೆ ಇಷ್ಟೆಲ್ಲ ಕಾಮಗಾರಿ ನಡೆದಿದೆಯೇ ಎಂದು ಪ್ರಶ್ನಿಸಿದರು. ಸಣ್ಣಪುಟ್ಟ ಕೆಲಸ ಪೂರ್ಣಗೊಂಡ ನಂತರವೇ ಟೆಂಡರ್ ನಿಯಮದಂತೆ ಅಂತಿಮವಾಗಿ ಬಿಲ್‌ ಮಂಜೂರು ಮಾಡಲು ಸಾಧ್ಯ ಎಂದರು.

ಸಂಕೀರ್ಣದ ಹಿಂಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಕಟ್ಟಡದ ಸುತ್ತ ಡಾಂಬರೀಕರಣ ರಸ್ತೆಯಾಗಬೇಕು. ವಿವಿಧ ಜಾತಿ ಸಸಿ ನೆಟ್ಟು ಬೆಳೆಸಬೇಕು. ಒಂದು ಸಾವಿರ ಲೀಟರ್ ಸಾಮರ್ಥ್ಯದ 14 ನೀರು ಶೇಖರಣಾ ಟ್ಯಾಂಕರ್ ಅಳವಡಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪಂಚಾಯಿತಿ ಪಿ.ಡಿ. ವಿಭಾಗ ಕಾರ್ಯನಿರ್ವಹಿಸುತ್ತಿದೆ. ಅ.15ರಿಂದ ಜಿಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಸರ್ಕಾರದ ಇಲಾಖಾವಾರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಮತ್ತು ಪಡೆಯಲು ನೆಟ್ ವರ್ಕ್ ಸೇವೆ ಅತಿಮುಖ್ಯ. ನೆಟ್‌ವರ್ಕ್ ಕೇಬಲ್ ತ್ವರಿತವಾಗಿ ಅಳವಡಿಸಿಕೊಳ್ಳಬೇಕು. ₹43 ಕೋಟಿ ವೆಚ್ಚದ ಜಿಲ್ಲಾಡಳಿತ ಸಂಕೀರ್ಣ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ ಸ್ವಲ್ಪ ವಿಳಂಬ ಆಗಿದೆ. ಕಟ್ಟಡದ ಪ್ರತಿಯೊಂದು ಹಂತದ ಕಾಮಗಾರಿ ಪರೀಕ್ಷಿಸಿಯೇ ಮುಂದಿನ ಹಂತಕ್ಕೆ ಹೋಗಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ಕೆ.ಪಿ.ಸಿ.ಸಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಏಳು ಮಂದಿ ರೈತರು 8.10 ಎಕರೆ ಜಾಗ ನೀಡಿದ್ದಾರೆ. ಆದಕ್ಕೆ ಪರ್ಯಾಯವಾಗಿ ನೀಡಿರುವ ಭೂಮಿಯಲ್ಲಿ ಒಬ್ಬ ರೈತರ ಜಮೀನು ಸಮತಟ್ಟುನಿಂದ ಕೂಡಿದೆ. ಉಳಿದ ರೈತರಿಗೆ ನೀಡಿದ ಜಮೀನು ಕೊರಕಲು ಗುಂಡಿಗಳಿವೆ. ತ್ವರಿತವಾಗಿ ಅನುಕೂಲ ಕಲ್ಪಿಸಬೇಕೆಂದು ಸಚಿವರ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಕರೀಗೌಡ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲತಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT