ಶುಕ್ರವಾರ, ಮೇ 20, 2022
19 °C

ಅರ್ಹರಿಗೆ ನಿವೇಶನಕ್ಕೆ ಸೂಚನೆ: ಶಾಸಕ ನಿಸರ್ಗ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಹಾರೋಹಳ್ಳಿಯಲ್ಲಿ ಅರ್ಹರನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಹೋಬಳಿಯ ಹಾರೋಹಳ್ಳಿಗೆ ಬುಧವಾರ ಭೇಟಿ ನೀಡಿದ್ದ ಅವರು, ಗ್ರಾಮದ ಕಾಲೊನಿಯ ಹಲವು ಮನೆಗಳಿಗೆ ಭೇಟಿ ನೀಡಿ, ಜನರು ವಾಸ ಮಾಡುತ್ತಿರುವ ಪರಿಸ್ಥಿತಿಯ ಬಗ್ಗೆ ಖುದ್ದು ಅವಲೋಕಿಸಿ ಮಾಹಿತಿ ಪಡೆದುಕೊಂಡ ಬಳಿಕ ಮಾತನಾಡಿದರು.

ಸುಮಾರು 30 ವರ್ಷಗಳಿಂದ ನಿವೇಶನ ಕೊಡುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಚುನಾವಣೆಗಳಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಆದರೆ, ಇದುವರೆಗೂ ಯಾರೊಬ್ಬರಿಗೂ ನಿವೇಶನಗಳು ಹಂಚಿಕೆ ಮಾಡಿಲ್ಲ. ಇದರಿಂದ ಜನರು ಸಮಸ್ಯೆಗಳಿಗೆ ಸಿಲುಕಿದ್ದಾರೆ. ಆದ್ದರಿಂದ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ ಎಂದರು.

ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ವಿಚಾರದಲ್ಲಿ ತಾರತಮ್ಯ, ರಾಜಕೀಯ ಮಾಡುವುದಿಲ್ಲ. ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಕೇವಲ 1 ಎಕರೆಯಷ್ಟು ಪ್ರದೇಶದಲ್ಲಿ ನೂರಾರು ಕುಟುಂಬಗಳಿರುವುದು ಕಂಡುಬಂದಿದೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆ. ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗೂ ಸೂಚನೆ ನೀಡಲಾಗಿದೆ. ಪುನಃ ಹೊಸದಾಗಿ ಅರ್ಜಿಗಳನ್ನು ಪಡೆದುಕೊಂಡು ಗ್ರಾಮ ಪಂಚಾಯಿತಿಯಲ್ಲಿ ನಿಯಮಾನುಸಾರ ಅರ್ಹರನ್ನು ಆಯ್ಕೆ ಮಾಡಿ ಮಂಜೂರು ಮಾಡಲಾಗುತ್ತದೆ ಎಂದು ವಿವರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯೆ ಮಾಲಾ ಮಾತನಾಡಿ, ಸರ್ವೇ ನಂಬರ್ 70 ಹಾಗೂ 73ರಲ್ಲಿ ಸರ್ಕಾರಿ ಗೋಮಾಳವಿದೆ. ಇದರಲ್ಲಿ ಕೆಲವರು ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ. ಆದರೆ, ಯಾರಿಗೂ ಅಧಿಕೃತವಾಗಿ ದಾಖಲೆಗಳನ್ನು ಮಾಡಿಕೊಟ್ಟಿಲ್ಲ. ಇದರಿಂದ ಸ್ಥಳೀಯರಿಗೆ ತುಂಬಾ ಸಮಸ್ಯೆಯಾಗಿದ್ದು, ಶೀಘ್ರವೇ ಬಗೆಹರಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು ಮಾತನಾಡಿ, ಇಲ್ಲಿ ವಾಸವಿಲ್ಲದೆ ಬೆಂಗಳೂರು ಸೇರಿದಂತೆ ಬೇರೆ ಊರುಗಳಲ್ಲಿ ವಾಸವಾಗಿರುವವರಿಗೂ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಬೇರೆ ಊರುಗಳಲ್ಲಿ ಇರುವವರಿಗೆ ನೀಡಬಾರದು. ಶಾಸಕರು ಸ್ವತಃ ಪರಿಸ್ಥಿತಿ ಅವಲೋಕಿಸಿದ್ದಾರೆ. ನಮ್ಮೂರಿನ ಬಡವರಿಗೆ ಮೊದಲು ನ್ಯಾಯ ಸಿಗಬೇಕು. ಅಂಗನವಾಡಿಯ ಬಳಿಯಲ್ಲಿ ಕೊಳಚೆ ನೀರು ಕುಂಟೆಯಂತೆ ನಿಂತಿರುವ ಕಾರಣ, ಮಕ್ಕಳ ಆರೋಗ್ಯ ಹದಗೆಡುತ್ತಿದೆ. ವಾತಾವರಣ ಕಲುಷಿತವಾಗುತ್ತಿದ್ದು, ಅಲ್ಲಿ ವ್ಯವಸ್ಥಿತವಾಗಿ ಚರಂಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಕೋರಿದರು.

ಅನುದಾನ: ಹಾರೋಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಔಷಧಿ ಸಸ್ಯಗಳ ಉದ್ಯಾನದಲ್ಲಿ ಸಲಕರಣೆಗಳನ್ನು ಅಳವಡಿಸಲು ಶಾಸಕರ ಅನುದಾನದಲ್ಲಿ ₹ 5 ಲಕ್ಷ, ಬುಳ್ಳಹಳ್ಳಿ ಗೇಟ್‌ನಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಕೆಗೆ ₹ 5 ಲಕ್ಷ, ಸಿ.ಸಿ ರಸ್ತೆಗಳ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್‌ ವತಿಯಿಂದ ಹಾರೋಹಳ್ಳಿಯ ಶಾಲಾ ಕಟ್ಟಡ ನಿರ್ಮಾಣಕ್ಕೆ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕರು ವಿವರಿಸಿದರು.

ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಉಪ ತಹಶೀಲ್ದಾರ್ ಚಿದಾನಂದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೊಣ್ಣೇಗೌಡ, ಸದಸ್ಯರಾದ ಮುನಿರಾಜು, ಮಾಲಾ, ವರಲಕ್ಷ್ಮಮ್ಮ, ಮುಖಂಡರಾದ ಕೋರಮಂಗಲ ವೀರಪ್ಪ, ಕಲ್ಯಾಣ್ ಕುಮಾರ್ ಬಾಬು, ಚಿಕ್ಕನಹಳ್ಳಿ ಸುಬ್ಬಣ್ಣ, ರವೀಂದ್ರ, ಕಾರಹಳ್ಳಿ ಮುನೇಗೌಡ, ಭೈರೇಗೌಡ, ಪ್ರಕಾಶ್, ಆವತಿ ರಾಜಣ್ಣ, ಬಸವರಾಜು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು