‘ಮೋದಿ ಹೆಸರಿನಲ್ಲಿ ಮತಯಾಚನೆ: ಟೀಕೆ’

ಮಂಗಳವಾರ, ಏಪ್ರಿಲ್ 23, 2019
33 °C
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವೀರಪ್ಪ ಮೊಯಿಲಿ ಮತ್ತೊಮ್ಮೆ: ವಿ.ಮಂಜುನಾಥ್ ವಿಶ್ವಾಸ

‘ಮೋದಿ ಹೆಸರಿನಲ್ಲಿ ಮತಯಾಚನೆ: ಟೀಕೆ’

Published:
Updated:
Prajavani

ವಿಜಯಪುರ: ‘ಸಂಸದ ವೀರಪ್ಪ ಮೊಯಿಲಿ ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಅವರಿಗಿರುವ ಬದ್ಧತೆಯನ್ನು ನೋಡಿ ಮತದಾರರು ಮೂರನೇ ಬಾರಿಗೆ ಅವರನ್ನು ಸಂಸತ್‌ಗೆ ಆಯ್ಕೆ ಮಾಡಲಿದ್ದಾರೆ’ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ವಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪಮೊಯಿಲಿ ಅವರ ಪರವಾಗಿ ಮತಯಾಚನೆ ಮಾಡಿದ ಅವರು ‘ನೀರಾವರಿ ತಜ್ಞ ಡಾ.ಜಿ.ಪರಮಶಿವಯ್ಯ ಅವರ ವರದಿ ಶಾಶ್ವತ ನೀರಾವರಿ ಯೋಜನೆ ಒಂದು ಭಾಗವಾಗಿರುವ ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಈ ಭಾಗಕ್ಕೆ ತರಲೇಬೇಕು ಎಂದು ಸರ್ಕಾರದ ಮುಂದೆ ವಿಚಾರ ಮಂಡಿಸಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಯೋಜನೆಗೆ ₹13 ಸಾವಿರ ಕೋಟಿ ಬಿಡುಗಡೆ ಮಾಡಿಸಿದ ಅವರು, ಈ ಭಾಗಕ್ಕೆ 24.01 ಟಿ.ಎಂ.ಸಿ. ನೀರು ತರಲು ಬದ್ಧರಾಗಿದ್ದಾರೆ’ ಎಂದು ಹೇಳಿದರು. ‌

‘ಎತ್ತಿನಹೊಳೆ ಯೋಜನೆಗೂ ಮುನ್ನಾ ಈ ಭಾಗದಲ್ಲಿನ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲದ ಮಟ್ಟವನ್ನು ಏರಿಕೆ ಮಾಡಲು ಎಚ್.ಎನ್.ವ್ಯಾಲಿ ಯೋಜನೆಗೆ ₹947.88 ಕೋಟಿ ಮೀಸಲಿಡಿಸಿ, ಮೂರು ಹಂತದಲ್ಲಿ ಶುದ್ಧೀಕರಿಸಿದ ನೀರು ತರಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ರೈತರೊಬ್ಬರು ಈ ನೀರಿನ ಶುದ್ಧೀಕರಣಕ್ಕೆ ಸಂಬಂಧಪಟ್ಟಂತೆ ಖಾತರಿಗಾಗಿ ನ್ಯಾಯಾಲಯದ ಮಟ್ಟಿಲೇರಿರುವ ಕಾರಣ ವಿಳಂಬವಾಗುತ್ತಿದೆ’ ಎಂದರು.

‘ಕ್ಷೇತ್ರದಲ್ಲಿ ವಿವಿಧ ಕಂಪನಿಗಳ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದಾರೆ. ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ರೈಲ್ವೆ ಯೋಜನೆಗಳನ್ನು ಕ್ಷೇತ್ರದಲ್ಲಿ ಜಾರಿಗೆ ತಂದಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿಸಿದ ಮೊಯಿಲಿ, ದೇವನಹಳ್ಳಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಬಡಕುಟುಂಬಗಳ ವಿದ್ಯಾರ್ಥಿಗಳಿಗೂ ಶಿಕ್ಷಣ ಸುಲಭವಾಗಿ ಸಿಗಬೇಕು ಎನ್ನುವ ಕಾರಣಕ್ಕಾಗಿ ಸಿ.ಇ.ಟಿ ಜಾರಿಗೆ ತಂದಿದ್ದಾರೆ’ ಎಂದು ಹೇಳಿದರು.

ಮುಖಂಡ ಮಹಬೂಬ್ ಪಾಷ ಮಾತನಾಡಿ ‘ಜನರನ್ನು ಬಿಜೆಪಿ ಮರಳುಗೊಳಿಸಲು ಅನೇಕ ತಂತ್ರ, ಸುಳ್ಳು ಆರೋಪ ಮಾಡಬಹುದು. ಜನರು ಬುದ್ಧಿವಂತರಿದ್ದಾರೆ. ಬಿಜೆಪಿಗೆ  ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳಿಕೊಳ್ಳಲು ಅವಕಾಶವಿಲ್ಲದೆ ಕೇವಲ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿಗೆ ಈ ದೇಶ ಜ್ಯಾತ್ಯತೀತ ರಾಷ್ಟ್ರ ಎನ್ನುವುದನ್ನೇ ಮರೆತು ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಮೋದಿ ಜನಪ್ರಿಯತೆ ಇದೆ. ಸಾಮಾನ್ಯ ಜನರ ಮನಸ್ಸಿನಲ್ಲಿ ಬಿಜೆಪಿ’ ಇಲ್ಲ ಎಂದು ಟೀಕಿಸಿದರು.

ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !