ಮೋದಿ ಜನರ ಸೇವಕ: ಎಸ್‌.ಎಂ ಕೃಷ್ಣ

ಶುಕ್ರವಾರ, ಏಪ್ರಿಲ್ 19, 2019
22 °C
ಚಂಬು, ಲೋಟದಲ್ಲಿ ಎತ್ತಿನಹೊಳೆ ನೀರು ತರಲು ಸಾಧ್ಯವೇ: ಶರತ್‌ ಬಚ್ಚೇಗೌಡ ಲೇವಡಿ

ಮೋದಿ ಜನರ ಸೇವಕ: ಎಸ್‌.ಎಂ ಕೃಷ್ಣ

Published:
Updated:
Prajavani

ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರು ಸ್ವಾಭಿಮಾನದ ಚೌಕಟ್ಟಿನಲ್ಲಿ ಚಿಂತಿಸಿ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ಅವರಿಗೆ ಮತ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.

ಇಲ್ಲಿನ ಚಪ್ಪರದಕಲ್ಲು ಗೋವಿಂದಪ್ಪ ಸಭಾಂಗಣದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸ್ವಂತ ಬಲದ ಮೇಲೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಒಬ್ಬ ತಪಸ್ವಿ ರಾಜಕಾರಣಿ‌. ಕಪ್ಪುಚುಕ್ಕೆ ಇಲ್ಲದೆ ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ, ಒಂದು ಬಾರಿ ದೇಶದ ಪ್ರಧಾನಿಯಾಗಿ ಸಮರ್ಥ ಆಡಳಿತ ನಡೆಸಿದ್ದಾರೆ. ವಿದೇಶಗಳಿಗೆ ಪ್ರವಾಸ ಮಾಡಿದ್ದು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಿ ದೇಶಕ್ಕೆ ವಿಶ್ವಮಟ್ಟದಲ್ಲಿ ಪ್ರತಿಷ್ಠೆ ಮತ್ತು ಗೌರವ ತಂದು ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

‘ಐದು ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದಾರೆ. ಮತದಾರರ ಭರವಸೆ ಈಡೇರಿಸಿದ್ದಾರೆ. 55 ವರ್ಷಗಳ ರಾಜಕೀಯ ಜೀವನದಲ್ಲಿ ಆನೇಕ ಪ್ರಧಾನಿಗಳನ್ನು ಕಂಡಿದ್ದೇನೆ. ಮೋದಿ ದೇಶದ ಜನರ ಸೇವಕ ಎಂದು ಹೇಳಬಹುದು’ ಎಂದರು.

‘ಐತಿಹಾಸಿಕ ದೇವನಹಳ್ಳಿ ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣಕ್ಕೆ ಆಡಿಗಲ್ಲು ಹಾಕುವ ಮೂಲಕ ಕಿರುಕಾಣಿಕೆ ನೀಡಿದ್ದೇನೆ. ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ ಎನಿಸಿಕೊಂಡಿದೆ. ಭ್ರಷ್ಟಾಚಾರ ಮುಕ್ತ ಬಿಜೆಪಿ ಸರ್ಕಾರಕ್ಕೆ ಮತ್ತೊಮ್ಮೆ ಬಿಜೆಪಿಗೆ ಮತ ನೀಡಿ’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ ಹಾಗೂ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್ ಮಾತನಾಡಿ, ಮೊಯಿಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಈ ಬಾರಿ ಬಿಜೆಪಿ ಬೆಂಬಲಿಸಲು ಕಾರ್ಯಕರ್ತರು ಜಾಗೃತಿ ಮೂಡಿಸಬೇಕು ಎಂದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮಾತನಾಡಿ, ಸಂಸದ ವೀರಪ್ಪ ಮೊಯಿಲಿ ಎಲ್ಲ ಕಡೆ ಎತ್ತಿನಹೊಳೆ ಯೋಜನೆ ಎಂದು ಹೇಳುತ್ತಲೇ ಇದ್ದಾರೆ. ಬಕೆಟ್, ಚೆಂಬು, ಲೋಟದಲ್ಲಿ ಎತ್ತಿನಹೊಳೆ ನೀರು ತರಲು ಸಾಧ್ಯವೇ ಎಂದು ಲೇವಡಿ ಮಾಡಿದರು.

ಪಕ್ಷದ ಜಿಲ್ಲಾ ಉಸ್ತುವಾರಿ ಸಚ್ಚಿದಾನಂದಮೂರ್ತಿ, ಬಿಜೆಪಿ ಮುಖಂಡ ಗೋಪಾಲಗೌಡ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಎನ್.ರಮೇಶ್ ಬಾಬು, ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್‌ಗೌಡ, ಪ್ರಧಾನ ಕಾರ್ಯದರ್ಶಿ ಸುನೀಲ್, ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಬಿ.ಜೆ.ಪಿ ಶಕ್ತಿ ಕೇಂದ್ರ ಅಧ್ಯಕ್ಷ ರಮೇಶ್, ಮುಖಂಡರಾದ ಮಾಚಪ್ಪ, ಎಸ್.ಜಿ.ನಾರಾಯಣಸ್ವಾಮಿ ಇದ್ದರು .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !