ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಯಿಲಿ ಜಾತಿ ರಾಜಕಾರಣ ಮಾಡಿಲ್ಲ: ಕಾಂಗ್ರೆಸ್‌–ಜೆಡಿಎಸ್‌ ಮುಖಂಡರು

Last Updated 8 ಏಪ್ರಿಲ್ 2019, 13:29 IST
ಅಕ್ಷರ ಗಾತ್ರ

ವಿಜಯಪುರ: ಸಂಸದ ವೀರಪ್ಪ ಮೊಯಿಲಿ ಅವರು 10 ವರ್ಷಗಳ ಅಧಿಕಾರಾವಧಿಯಲ್ಲಿ ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ. ಜಾತಿ ರಾಜಕಾರಣ ಮಾಡುವವರೇ ಅವರ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಐಬಸಾಪುರ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಸಂಸದ ಎಂ. ವೀರಪ್ಪ ಮೊಯಿಲಿ ಅವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು, ‘ವೀರಪ್ಪ ಮೊಯಿಲಿ ಅವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಯಾರ ಬಗ್ಗೆ ಮಾತನಾಡಲಿಲ್ಲ, ಅಭಿವೃದ್ಧಿ ಕೆಲಸಗಳನ್ನಷ್ಟೆ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಅವರನ್ನು ಜಾತಿ ರಾಜಕಾರಣಿ ಎಂದು ಹೇಳುವುದು ಸರಿಯಲ್ಲ’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ಎನ್. ಬಚ್ಚೇಗೌಡ ಅವರು, 10 ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಅವರ ಕೊಡುಗೆಯೇನು ಎನ್ನುವುದನ್ನು ದಾಖಲೆ ಸಮೇತ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ವಿನಾಕಾರಣ ವೃಥಾ ಆರೋಪಗಳನ್ನು ಮಾಡಬಾರದು ಎಂದರು.

ಜೆಡಿಎಸ್ ಮುಖಂಡ ಐಬಸಾಪುರ ಶ್ರೀರಾಮಯ್ಯ ಮಾತನಾಡಿ, ರಾಜಕೀಯ ಮಾಡಬೇಕು, ಆದರೆ, ಕುಟುಂಬಗಳಲ್ಲಿ ಒಡಕು ಮೂಡಿಸಿ ರಾಜಕೀಯ ಲಾಭ ಪಡೆದುಕೊಳ್ಳುವುದು ಸರಿಯಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಎಲ್ಲ ಸಮುದಾಯಗಳಿಗೂ ತಾರತಮ್ಯ ತೋರದೆ ಸಂಸದರ ನಿಧಿಯಿಂದ ಏನು ಮಾಡಬಹುದೋ ಅದನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆಯ ಕಾಮಗಾರಿಯ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ಜನರು ತಾಳ್ಮೆ ಕಳೆದುಕೊಳ್ಳಬಾರದು. ಶಾಂತರೀತಿಯಿಂದ ಇದ್ದರೆ ಶೇ 60 ರಷ್ಟು ಪೂರ್ಣಗೊಂಡಿರುವ ಕಾಮಗಾರಿ 2 ವರ್ಷಗಳಲ್ಲಿ ಪೂರ್ಣಗೊಂಡು ಈ ಭಾಗಕ್ಕೆ ನೀರು ಹರಿಯಲಿದೆ. ಆದ್ದರಿಂದ ಈ ಬಾರಿ ಅವಕಾಶ ನೀಡಿ ಗೆಲ್ಲಿಸಿದರೆ ಅನುಕೂಲವಾಗಲಿದೆ ಎಂದರು.

ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಣೆ ಮಾಡಿ ಮತಯಾಚನೆ ಮಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿನ್ನೂರು ವೆಂಕಟೇಶ್, ಚೈತ್ರಾ ವೀರೇಗೌಡ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಕಯಮ್ಮ, ಲಕ್ಷ್ಮಣಗೌಡ, ಹಿತ್ತರಹಳ್ಳಿ ರಮೇಶ್, ಶಂಕರಪ್ಪ, ವೆಂಕಟಗಿರಿ ಕೋಟೆ ಚಿನ್ನಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ವೀರೇಗೌಡ, ಮುನಿಕೃಷ್ಣಪ್ಪ, ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಐ.ಬಿ. ಆಂಜಿನಪ್ಪ, ಉಮಾದೇವಿ ತಮ್ಮೇಗೌಡ, ರಾಮೇಗೌಡ, ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT