ಮಂಗಳವಾರ, ಮೇ 24, 2022
23 °C
ಜಾನುವಾರು ಹತ್ಯೆ ಕಾಯ್ದೆ ಅನುಷ್ಠಾನಗೊಳಿಸುವ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಜಾನುವಾರ ಸಾಗಣೆ ಕಾನೂನು ಬಾಹಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಜಾನುವಾರು ಸಾಗಣೆ ಮಾಡುವಂತಿಲ್ಲ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕಾರ್ಯಾಚರಣೆ ಮೂಲಕ ವಶಪಡಿಸಿಕೊಳ್ಳಲಾಗುವ ಜಾನುವಾರುಗಳನ್ನು ಹತ್ತಿರದ ಗೋಶಾಲೆಗಳಿಗೆ ಬಿಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ವಿಡಿಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ಗುರುವಾರ ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದಿಂದ ನಡೆದ ಕರ್ನಾಟಕ ಜಾನುವಾರು ಹತ್ಯೆ ಕಾಯ್ದೆ ಅನುಷ್ಠಾನಗೊಳಿಸುವ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಣಿ ದಯಾ ಸಂಘದ ಸದಸ್ಯರ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವಂತೆ ಅರಣ್ಯದಲ್ಲಿ ಹಣ್ಣಿನ ಗಿಡ ನೆಟ್ಟು, ಪೋಷಣೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಜಾನುವಾರು ಸಾಗಣೆ ಮಾಡುವಾಗ ವಾಹನಗಳು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.

ಮಿಶ್ರ ತಳಿಯ ಗಂಡು ಕರುಗಳು ಜನಿಸಿದ ತಕ್ಷಣ ಗೋಶಾಲೆಗಳಿಗೆ ಅಥವಾ ಕಸಾಯಿ ಖಾನೆಗಳಿಗೆ ನೀಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದ್ದು, ಕರುಗಳಿಗೆ ತಾಯಿ ಹಸುವಿನ ಹಾಲು ಸಿಗದೆ ಅಪೌಷ್ಟಿಕತೆಯಿಂದ ಬೇಗ ಮರಣ ಹೊಂದುವ ಸಾಧ್ಯತೆ ಇರುವುದರಿಂದ ಪಶುಸಂಗೋಪನಾ ಇಲಾಖೆಯಿಂದ ಗೋಶಾಲೆ ಮುಖ್ಯಸ್ಥರು ಸೇರಿದಂತೆ ರೈತರಿಗೆ ಕಾರ್ಯಾಗಾರ  ನಡೆಸುವ ಮೂಲಕ ಕರುಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ತಯಾರಿಕಾ ಕ್ರಮ ತಿಳಿಸಬೇಕು ಎಂದು ಸಲಹೆ ನೀಡಿದರು.

ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕರಾದ ಡಾ. ಜಿ.ಎಂ.ನಾಗರಾಜು ಮಾತನಾಡಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಆದ್ಯಾದೇಶ 2020ರ ಕಾಯ್ದೆ ಕುರಿತು ಪಿಪಿಟಿ ಮೂಲಕ ಸಭೆಗೆ ಮಾಹಿತಿ ನೀಡಿದರು. 13 ವರ್ಷದೊಳಗಿನ ಜಾನುವಾರುಗಳನ್ನು 15 ಕಿಲೋಮೀಟರ್ ವ್ಯಾಪ್ತಿಯೊಳಗೆ ಕೃಷಿ ಅಥವಾ ಸಾಕಾಣಿಕೆ ಉದ್ದೇಶದಿಂದ ಸಾಗಣೆ ಮಾಡಲು ಅನುಮತಿ ಅಗತ್ಯವಿರುವುದಿಲ್ಲ. ಆದರೆ, 15 ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಸಾಗಣೆ ಮಾಡುವಂತಿದ್ದರೆ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆ ಮಂಜೂರು ಮಾಡಲಾಗುವ ಉದ್ದೇಶ ಹೊಂದಿದ್ದು, ಸೂಕ್ತ ಸ್ಥಳಾವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಡಾ. ವಿ.ಜೀವನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನವಿಲುಗಳ ಹತ್ಯೆ ಹೆಚ್ಚಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಮನ ಸೆಳೆದರು. 

ಅರಣ್ಯ ಉಪ ಸಂರಕ್ಷಣಾಧಿಕಾರಿ(ಟೆರಿಟೋರಿಯಲ್) ಅಂಥೋಣಿ ಮರಿಯಪ್ಪ ಅವರು ಪ್ರತಿಕ್ರಿಯಿಸಿ, ನವಿಲು ಹಾಗೂ ಮಂಗಗಳ ಸಂತತಿಯ ಅಂಕಿ-ಅಂಶಗಳು ಹೆಚ್ಚಾಗಿದೆ. ಹಂತ ಹಂತವಾಗಿ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಸುಮಾ, ಪಶುಸಂಗೋಪನಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್.ಸಿ.ಎಸ್., ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಹನುಮಂತಪ್ಪ, ನೆಲಮಂಗಲದ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ, ನೆಲಮಂಗಲ ನಗರಸಭೆ ಪೌರಾಯುಕ್ತರಾದ ಮಂಜುನಾಥಸ್ವಾಮಿ, ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರಾದ ಪ್ರದೀಪ, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ನಾಗರಾಜು, ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ತಾಲ್ಲೂಕು ಪಶು ಪಾಲನಾಧಿಕಾರಿಗಳು ಇದ್ದರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು