ತಾಯಿ ಜಗತ್ತಿನಲ್ಲಿ ಕಣ್ಣೆದುರಿಗೆ ಕಾಣುವ ದೇವರು

ಭಾನುವಾರ, ಮೇ 26, 2019
28 °C
ಕಸಾಪ ಕಚೇರಿಯಲ್ಲಿ ವಿಶ್ವ ತಾಯಂದಿರ, ಕುಟುಂಬ ದಿನ ಆಚರಣೆ

ತಾಯಿ ಜಗತ್ತಿನಲ್ಲಿ ಕಣ್ಣೆದುರಿಗೆ ಕಾಣುವ ದೇವರು

Published:
Updated:
Prajavani

 ವಿಜಯಪುರ: ತಾಯಿ ಈ ಜಗತ್ತಿನಲ್ಲಿ ಕಣ್ಣೆದುರಿಗೆ ಕಾಣುವ ದೇವರು, ಅವರ ಆಜ್ಞೆಯಂತೆ ನಡೆದವರು ಸಮಾಜದಲ್ಲಿ ಬಹು ಉನ್ನತವಾದ ಸ್ಥಾನಗಳನ್ನು ಅಲಂಕರಿಸಲಿಕ್ಕೆ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ. ಮಾ. ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿ ಚೌಕದಲ್ಲಿರುವ ಕಸಾಪ ಜಿಲ್ಲಾ ಘಟಕದ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ತಾಯಂದಿರ ದಿನ, ವಿಶ್ವ ಕುಟುಂಬ ದಿನ, ವಿಶ್ವ ಹಾಸ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಂದಿರಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಬರಲಿಕ್ಕೆ ಸಾಧ್ಯವಿದೆ. ತಾಯಿಯ ಸೇವೆಗೆ ಬದಲೇನೂ ಕೊಡಲಿಕ್ಕೆ ಸಾಧ್ಯವಿಲ್ಲ. ಪುರಾಣಗಳಲ್ಲಿ ತಂದೆ, ತಾಯಿಯರ ಮಾತಿಗೆ ಗೌರವ, ಪ್ರೀತಿಯಿಂದ ನಡೆದುಕೊಂಡ ಶ್ರವಣಕುಮಾರ್, ಶ್ರೀರಾಮಚಂದ್ರ, ಭಕ್ತಪುಂಡಲೀಕ, ಛತ್ರಪತಿ ಶಿವಾಜಿ ಇಂತಹ ಮಹನೀಯರು ತಂದೆ ತಾಯಿಯರ ಸೇವೆಯನ್ನು ಮಾಡಿದ್ದರಿಂದ ಇಂದು ಚರಿತ್ರೆಗಳಲ್ಲಿ ಉಳಿದಿದ್ದಾರೆ ಎಂದರು.

ತಂದೆ, ತಾಯಿಯರು ಮಕ್ಕಳಿಗಾಗಿ ಬಹಳ ಕಷ್ಟಗಳನ್ನು ಸಹಿಸಿರುತ್ತಾರೆ. ಮಕ್ಕಳ ಬಾಲ್ಯ ಚೆನ್ನಾಗಿರಬೇಕು, ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕೆಂದು ಪ್ರಯತ್ನಿಸುತ್ತಾರೆ ಆದರೆ, ಅನೇಕ ಮಕ್ಕಳು ತಂದೆ ತಾಯಿಯರಿಗೆ ಎದುರುತ್ತರ ನೀಡುತ್ತಾರೆ. ಅದರಿಂದ ತಂದೆ ತಾಯಿಯರ ಮನಸ್ಸಿಗೆ ನೋವಾಗುತ್ತದೆ. ತಂದೆ ತಾಯಿಯರಿಗೆ ಈ ರೀತಿ ಮಾತಾಡಿ ಮನಸ್ಸು ನೋಯಿಸಿದರೆ ದೇವರ ಮನಸ್ಸನ್ನೇ ನೋಯಿಸಿದಂತಾಗುತ್ತದೆ ಆದ್ದರಿಂದ ಮಕ್ಕಳು ಅವರನ್ನು ಗೌರವಿಸಬೇಕು ಎಂದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ ಹಡಪದ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏಳು ಸೂತ್ರಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು ತಾನಾಗಿಯೇ ಲಭಿಸುತ್ತದೆ ಎಂದರು.

ವಿದ್ಯೆ, ಶಿಸ್ತು, ಸದ್ಗುಣ, ಸಂಸ್ಕಾರ, ಶ್ರದ್ಧೆ, ಭಕ್ತಿ, ಧೈರ್ಯವನ್ನು ಅಳವಡಿಸಿಕೊಳ್ಳಬೇಕು. ಈ ಏಳು ಗುಣಗಳನ್ನು ಮಕ್ಕಳಿಂದಲೇ ಅಭ್ಯಾಸ ಮಾಡಿಸುವ ತಾಯಂದಿರ ಸೇವೆ ಅವಿಸ್ಮರಣೀಯವಾದದ್ದು ಎಂದರು.

ತಾಯಂದಿರ ದಿನದ ಅಂಗವಾಗಿ ಮುನಿರತ್ನಮ್ಮ, ಜಯಲಕ್ಷ್ಮಮ್ಮ, ಅನಸೂಯಮ್ಮ, ಗೌರಮ್ಮ, ರುಕ್ಮಿಣಿಯಮ್ಮ, ಅಂಬಾಭವಾನಿ, ಕಾಮಾಕ್ಷಮ್ಮ, ರತ್ನಮ್ಮ, ಶೈಲಜಾ, ಚಂದ್ರಕಲಾ, ತಾಜುನ್ನೀಸಾ, ಮಾನಸ ಅವರನ್ನು ಗೌರವಿಸಲಾಯಿತು.

ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಅಶ್ವಿನಿಪ್ರವೀಣ್, ರುಕ್ಮಿಣಿಶ್ರೀನಿವಾಸ್, ಡಾ.ಶಿವಕುಮಾರ್, ಕೆ.ಎಚ್.ಚಂದ್ರಶೇಖರ್, ಆರ್. ಮುನಿರಾಜು, ಮೂರ್ತಿ, ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !