ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟಿಬಿ ಸ್ವಾರ್ಥಿ, ಪಕ್ಷದ್ರೋಹಿ: ಜಿ.ಪಂ ಸದಸ್ಯ ವಿ.ಪ್ರಸಾದ್ ಆರೋಪ

ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಚುನಾವಣಾ ಪ್ರಚಾರ
Last Updated 17 ನವೆಂಬರ್ 2019, 12:59 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಹೆಣ್ಣು ಮಕ್ಕಳಿಗೆ ಅರಿಶಿನ, ಕುಂಕುಮ ನೀಡಿ ಆಶೀರ್ವದಿಸಿ ಮಡಿಲು ತುಂಬುವ ಸಂಸ್ಕೃತಿ ನಮ್ಮಲ್ಲಿದೆ. ನಿಮ್ಮ ಮನೆ ಮಗಳ ಮಡಿಲನ್ನು ಮತದಾನದ ಮೂಲಕ ತುಂಬಿ ಸೇವೆ ಮಾಡಲು ಅವಕಾಶ ನೀಡಿ’ ಎಂದು ಹೊಸಕೋಟೆ ವಿಧಾನಸಭಾ ಉಪ ಚುನಾವಣೆ ಮತದಾರರಲ್ಲಿ ಮನವಿ ಮಾಡಿದರು.

ನಂದಗುಡಿ ಸೇರಿದಂತೆ ಹಳೆವೂರು, ಚೊಕ್ಕಸಂದ್ರ, ಗಿಡ್ಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲ ಗ್ರಾಮಸ್ಥರು, ಕಾರ್ಯಕರ್ತರು ಅಭೂತ ಪೂರ್ವವಾಗಿ ಸ್ವಾಗತಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಬೆಂಬಲ ಸೂಚಿಸುತ್ತಿರುವುದು ಸಂತೋಷದ ವಿಷಯ. ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿರುವುದು ಹರ್ಷ ತಂದಿದೆ’ ಎಂದರು.

‘ಎಂಟಿಬಿ ನಾಗರಾಜ್ ಅವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಸಂತೋಷ. ಆದರೆ ಇದಕ್ಕೆ ಡಿ. 2ರಂದು ಮತ ಹಾಕುವ ಮೂಲಕ ಜನ ಉತ್ತರ ನೀಡುತ್ತಾರೆ. ಅವರಿಗೆ ಮತದಾರರ ಬೆಂಬಲ ಇಲ್ಲ’ ಎಂದು ಕುಟುಕಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್ ಮಾತನಾಡಿ, ‘ಎಂಟಿಬಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ, ಆಹಾರ ಸರಬರಾಜು ಇಲಾಖೆ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಂತರ ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿ ಅಧಿಕಾರ ಅನುಭವಿಸಿ ತಮ್ಮ ಸ್ವಾರ್ಥ ಈಡೇರಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಯಾಗಿ, ವಿಧಾನೆಸಭೆಯಿಂದ ಅನರ್ಹಗೊಂಡು, ಪಕ್ಷ ದ್ರೋಹಿಯಾಗಿದ್ದಾರೆ. ಅವರನ್ನು ಜನ ತಿರಸ್ಕರಿಸಿದ್ದಾರೆ’ ಎಂದರು.

ಸಿದ್ಧರಾಮಯ್ಯ ಸರ್ಕಾರದ ಭಾಗ್ಯಗಳ ಶ್ರೀರಕ್ಷೆ: ‘ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಅವಧಿಯಲ್ಲಿ ಬಡವರಿಗೆ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ ಯೋಜನೆಗಳು ದೇಶದಲ್ಲಿ ಬೇರೆ ಯಾರೂ ಮಾಡಿರದ ಯೋಜನೆಗಳಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ನಮಗೆ ಶ್ರೀರಕ್ಷೆ’ ಎಂದರು.

‘ಪಿಳ್ಳಣ್ಣ ಅವರು ತಮಗೆ ಆದ ಅನ್ಯಾವನ್ನು ಹೇಳಿಕೊಳ್ಳುತ್ತಿದ್ದಾರೆ. ಜನರಿಗೆ ಮೋಸ ಹೋಗಬೇಡಿ ಎಂದು ಎಚ್ಚರಿಸುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದರು.

ನೀರಿನ ಸಮಸ್ಯೆ ಬಗೆ ಹರಿಸಿ: ಪದ್ಮಾವತಿ ಸುರೇಶ್ ಅವರು ಗ್ರಾಮಗಳಲ್ಲಿ ಪ್ರಚಾರಕ್ಕೆ ತೆರಳಿದಾಗ ನಂದಗುಡಿ ಹಾಗೂ ಇನ್ನಿತರ ಗ್ರಾಮದ ಮಹಿಳೆಯರು ನೀರಿನ ಸಮಸ್ಯೆ ಬಗೆಹರಿಸಿ’ ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತರ ಮುಖಂಡ ಸಗೀರ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಕೆ.ಸತ್ಯವಾರ ಚರಣ್ ಕುಮಾರ್ ಹಾಗೂ ಹೋಬಳಿಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT