ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಭಯಕ್ಕೆ ಎಂಟಿಬಿ ಹತಾಶೆ: ಶರತ್ ಬಚ್ಚೇಗೌಡ

Last Updated 1 ಡಿಸೆಂಬರ್ 2019, 16:00 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಹೊಸಕೋಟೆ ಉಪ ಚುನಾವಣೆಯಲ್ಲಿ ನನ್ನ ಗೆಲುವು ಶತಸಿದ್ಧವಾಗಿದ್ದು, ಗೆದ್ದರೆ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬ ಅನುಮಾನದ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದೆ, ಈ ಕ್ಷೇತ್ರದ ಮತದಾರರನ್ನು ಬಿಟ್ಟು ನಾನು ಯಾವುದೇ ವೈಯಕ್ತಿಕವಾದ, ಸ್ವಾರ್ಥದ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಮಾತು ನೀಡುತ್ತೇನೆ’ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.

ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬೈಯಪಾ, ತಾಲ್ಲೂಕು ಕಚೇರಿ, ಟೋಲ್, ಬಿಎಂಆರ್ಡಿ ಯ ಲಂಚದ ಹಣದಿಂದ ಈ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಆಸ್ತಿ ಕೆಲವೇ ತಿಂಗಳುಗಳಲ್ಲಿ ₹185 ಕೋಟಿ ಹೆಚ್ಚಾಗಿದೆ. ಈ ಹಣದಿಂದಲೇ ಚುನಾವಣಾ ಕಣಕ್ಕೆ ಇಳಿದಿರುವ ಅವರು ಗ್ರಾಮ ಪಂಚಾಯಿತಿ ಸದಸ್ಯರಿಗೆ 3 ಲಕ್ಷ, ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ 15-20 ಲಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ 70 ಲಕ್ಷದಿಂದ 1 ಕೋಟಿ ಬೆಲೆ ಕಟ್ಟಿದ್ದು, ನನಗೂ ಕೂಡ 120 ಕೋಟಿಯ ಬೆಲೆ ಕಟ್ಟಿದ್ದರು. ಹೀಗೆ ನಮ್ಮನ್ನೇ ಬೆಲೆ ಕಟ್ಟುವ ಅವರು ಮತದಾರರಿಗೂ ಬೆಲೆ ಕಟ್ಟುತ್ತಾರೆ’ ಎಂದು ಆರೋಪಿಸಿದರು.

‘ಮಂಡ್ಯ ಕ್ಷೇತ್ರದ ಜನರು ಲೋಕಸಭೆಯಲ್ಲಿ ಸ್ವಾಭಿಮಾನವನ್ನು ಉಳಿಸಿಕೊಂಡ ಹಾಗೆ ನಾವು ಹೊಸಕೋಟೆಯ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕು’ ಎಂದು ಮತದಾರರಲ್ಲಿ ಕೇಳಿಕೊಂಡರು.

ನಾಗರಾಜ್ ಅವರು, ಬಚ್ಚೇಗೌಡರ ಕುಟುಂಬ 269 ಎಕರೆ ಜಮೀನು ಕಬಳಿಕೆ ಮಾಡಿದೆ ಎಂಬ ಆರೋಪಕ್ಕೆ, ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿ, ಬಚ್ಚೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಶರತ್ ಬಚ್ಚೇಗೌಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು; ಬಚ್ಚೇಗೌಡ ಬಜೆಪಿ ಪಕ್ಷದ ಸಂಸದರು, ಆರೋಪ ಮಾಡುತ್ತಿರುವವರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಯಾಗಿದ್ದು ಇದು ಅವರ ಪಕ್ಷದ ಆಂತರಿಕ ವಿಷಯವಾಗಿದೆ. ಪಕ್ಷದ ವರಿಷ್ಠರು ಬಗೆಹರಿಸಿಕೊಳ್ಳಲಿ ಎಂದರು.

‘ನಾಗರಾಜ್ ಅವರಿಗೆ ಸೋಲುವ ಭೀತಿ ಕಾಡುತ್ತಿದ್ದು, ಹತಾಶರಾಗಿ ನಾನಾ ರೀತಿಯ ಆಪಾದನೆಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಹತಾಶರಾಗುವುದಕ್ಕೂ ಇತಿ ಮಿತಿಗಳಿದ್ದು, ನನ್ನ ಮೇಲೆ ಆಪಾದನೆಗಳಿದ್ದರೆ ದಾಖಲೆ ಸಮೇತ ಬರಲಿ. ವಯಸ್ಸಿಗೆ ತಕ್ಕಂತೆ ಮಾತನಾಡಲಿ ಎಂದು ಸವಾಲೆಸೆದರು.

ಯಾವುದೇ ಕಾರಣಕ್ಕೂ ಶರತ್ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತಿಗೆ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿ, ‘ನಾನು ಯಾವುದೇ ಪಕ್ಷಕ್ಕೆ ಸೇರುತ್ತೇವೆ ಎಂದು ಎಲ್ಲೂ ಹೇಳಿಲ್ಲ, ಸೋಲುವ ಹತಾಶೆಯಿಂದ ಈ ರೀತಿಯ ಹೇಳಿಕೆಗಳನ್ನು ರಾಷ್ಟ್ರೀಯ ಪಕ್ಷದ ವರಿಷ್ಠರು ಹೇಳುತ್ತಿದ್ದಾರೆ. ಮತದಾರರು ಮತ ಹಾಕಿ ಆಶೀರ್ವಾದ ಮಾಡಿದ ನಂತರ, ಮತದಾರರ ಬಳಿ ಹೋಗಿ ಎಲ್ಲರ ತೀರ್ಮಾನವನ್ನು ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT