ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲಕ್ಕೆ ಸಜ್ಜಾಗದ ದೊಡ್ಡಬಳ್ಳಾಪುರ ನಗರಸಭೆ

Last Updated 2 ಆಗಸ್ಟ್ 2021, 3:02 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮುಂಗಾರು ಆರಂಭ ವಾದಾಗಿನಿಂದ ನಗರಸಭೆ ವ್ಯಾಪ್ತಿಯಲ್ಲಿ ಜೋರು ಮಳೆಯಾಗಿರುವುದು ಇನ್ನೂ ಎರಡು ಬಾರಿ ಮಾತ್ರ. ಹಲವಾರು ತಗ್ಗುಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿವೆ. ಇನ್ನು ರಸ್ತೆಗಳಂತು ಕಿತ್ತು ಹೋಗಿ ದೊಡ್ಡಬಳ್ಳಾಪುರಕ್ಕೆ ಬದಲಾಗಿ ‘ಗುಂಡಿಗಳಪುರ’ ಎನ್ನುಷ್ಟರಮಟ್ಟಿಗೆ ಹಾಳಾಗಿವೆ. ರಾತ್ರಿ ವೇಳೆ ಇರಲಿ ಹಗಲಿನಲ್ಲೇ ಓಡಾಡುವುದೇ ಕಷ್ಟವಾಗಿದೆ.

ನಗರಸಭೆಯಲ್ಲಿ ಚುನಾಯಿತ ಜನ ಪ್ರತಿನಿಧಿಗಳು ಇಲ್ಲದೆ ಎರಡು ವರ್ಷಗಳು ಕಳೆದು ಹೋಗಿದೆ. ವಾರ್ಡ್‌ಗಳ ವಿಂಗಡಣೆ, ಮೀಸಲಾತಿ ಸೇರಿದಂತೆ ಹಲವಾರು ಗೊಂದಲದಿಂದಾಗಿ ನಗರಸಭೆ ಚುನಾವಣೆ ಮುಂದೂಡು ತ್ತಲೇ ಹೋಗುತ್ತಿದೆ. ಹೀಗಾಗಿ ಯಾವ ವಾರ್ಡ್‌ನಲ್ಲಿ ಏನು ಕೆಲಸವಾಗಬೇಕು, ಮಳೆಗಾಲಕ್ಕೆ ಹೇಗೆ ನಗರವನ್ನು ಸಜ್ಜುಗೊಳಿಸಬೇಕು ಎನ್ನುವ ಯಾವುದೇ ಮುಂದಾಲೋಚನೆ ಇಲ್ಲದಾಗಿದೆ. ನಗರಸಭೆ ಅಧಿಕಾರಿಗಳಿಗೆ ಒಂದೂ ವರೆ ವರ್ಷಗಳಿಂದ ಕೋವಿಡ್‌ ನಿರ್ವಹಣೆಯೇ ದೊಡ್ಡ ಕೆಲಸವಾಗಿ ನಗರದಲ್ಲಿನ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಲು ಸಮಯವೇ ಇಲ್ಲದಂತಾಗಿದೆ.

ಹಗ್ಗಜಗ್ಗಾಟ: ನಗರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರೋತ್ಥಾನ ಯೋಜನೆಯಡಿ ಮಂಜೂರಾಗಿದ್ದ ₹ 8 ಕೋಟಿ ಅನುದಾನ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರ ಹಗ್ಗಜಗ್ಗಾಟದಿಂದಾಗಿ ಸರ್ಕಾರ ಹಿಂದಕ್ಕೆ ಪಡೆದಿದೆ.

ಕಾಂಗ್ರೆಸ್‌ ಪಕ್ಷದ ಮುಖಂಡರು ಹೇಳಿದ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಮಂಜೂರಾಗಿ ಕಾಮಗಾರಿ ನಡೆದರೆ ನಗರಸಭೆಯ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವ ವಾದ ಬಿಜೆಪಿ ಮುಖಂಡರದ್ದು.

ನಗರಸಭೆ ವ್ಯಾಪ್ತಿಯಲ್ಲಿನ ಯಾವ ವಾರ್ಡ್‌ಗಳಲ್ಲಿ ತುರ್ತು ಕಾಮಗಾರಿಗಳು ಆಗಬೇಕಿದೆ ಎನ್ನುವ ಪ್ರಥಮ ಆದ್ಯತೆಯ ಮೇರೆಗೆ ಅನುದಾನ ಹಂಚಿಕೆ ಮಾಡಲಾಗಿತ್ತೇ ವಿನಾ ಇದರಲ್ಲಿ ಯಾವುದೇ ರೀತಿಯ ರಾಜಕಾರಣವೂ ಇರಲಿಲ್ಲ. ಆದರೆ, ಬಿಜೆಪಿ ಮುಖಂಡರ ದುರುದ್ದೇಶದಿಂದ ನಗರೋತ್ಥಾನ ಯೋಜನೆಯಡಿ ಹಣ ಬಿಡುಗಡೆಯಾಗದಂತೆ ತಡೆದಿದ್ದಾರೆ ಎನ್ನುವುದು ಶಾಸಕ ವೆಂಕಟರಮಣಯ್ಯ ಅವರ ಆರೋಪ.

ಇದು ಗುಂಡಿಗಳಪುರ: ನಗರದ ಬಸ್‌ ನಿಲ್ದಾಣ, ತಾಲ್ಲೂಕು ಕಚೇರಿ ರಸ್ತೆ, ಚೌಕದ ರಸ್ತೆ, ತೇರಿನ ಬೀದಿ ರಸ್ತೆಗಳಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ತಿರುಗಾಡುವ ರಸ್ತೆಗಳಾಗಿವೆ. ಪ್ರಮುಖ ರಸ್ತೆಗಳಲ್ಲಿಯೇ ಈ ರೀತಿ ಗುಂಡಿಗಳು ಬಿದ್ದು ಹಾಳಾಗಿದ್ದರೂ ಯಾರೊಬ್ಬರು ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ನಗರದ ಗಲ್ಲಿ ರಸ್ತೆಗಳಲ್ಲಿ ನಡೆದಾಡುವವರ ಪಾಡಂತು ಹೇಳತೀರದು.

ಮಳೆ ಪ್ರಾರಂಭವಾದಾಗಿನಿಂದ ಮುಗುವಾಳಪ್ಪ ವೃತ್ತದಲ್ಲಿನ ಗುಂಡಿ ದೊಡ್ಡದಾಗಿ ವಿಸ್ತಾರವಾಗುತ್ತಲೇ ಹೋಗುತ್ತಿದೆ. ಕನಿಷ್ಠ ಗುಂಡಿಗೆ ಡಾಂಬರು ಇರಲಿ, ಜೆಲ್ಲಿಕಲ್ಲುಗಳನ್ನಾದರು ಹಾಕಿ ಮುಚ್ಚಿಲ್ಲ. ಮಳೆ ಬಂದಾಗ ರಸ್ತೆಗಳಲ್ಲಿನ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎನ್ನುವುದೇ ತಿಳಿಯದೆ ಬೈಕ್‌ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.

ನಗರದಲ್ಲಿ ಮಳೆ ನೀರು ಹರಿದು ಹೊರಹೋಗುವ ಪ್ರಮುಖ ರಾಜಕಾಲುವೆಗಳಾದ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಸಮೀಪದ ಕಾಲುವೆ, ಎಪಿಎಂಸಿ ಸಮೀಪದ ಕಾಲು, ಸಂಜಯನಗರ ಸಮೀಪದ ಕಾಲುವೆ ಹಾಗೂ ಖಾಸ್‌ಬಾಗ್‌ ಸಮೀಪ ಕಾಲುವೆಗಳಲ್ಲಿ ಹಳೇ ಮನೆಗಳ ಕಟ್ಟಡಗಳ ತ್ಯಾಜ್ಯಗಳಿಂದ ತುಂಬಿಕೊಂಡಿದೆ. ಇದು ಒಂದು ಕಡೆಯಾದರೆ, ಕಾಲುವೆಯ ಬದಿಗಳಲ್ಲಿ ಬೆಳೆದಿರುವ ಗಿಡಗಳ ಬೇರುಗಳಿಗೆ ನಗರಸಭೆ ವ್ಯಾಪ್ತಿಯಿಂದ ಮಳೆ ನೀರಿನೊಂದಿಗೆ ಹರಿದು ಬರುವ ಪ್ಲಾಸ್ಟಿಕ್‌ ವಸ್ತುಗಳು, ಪ್ಲಾಸ್ಟಿಕ್‌ ಕವರ್‌ಗಳು ಸಿಕ್ಕಿಹಾಕಿಕೊಂಡು ಕಾಲುವೆಗಳಲ್ಲಿ ಹರಿಯಬೇಕಿರುವ ಮಳೆ ನೀರು ರಸ್ತೆಗಳು, ಕಾಲುವೆಗಳ ಬದಿಯಲ್ಲಿನ ಮನೆಗಳಿಗೆ ನುಗ್ಗುತ್ತಿವೆ. ಮಳೆಗಾಲ ಆರಂಭವಾಗಿರುವ ಈ ಸಂದರ್ಭದಲ್ಲಾದರೂ ನಗರಸಭೆಯು ಪ್ರಮುಖ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಸಜ್ಜುಗೊಳಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT