ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಕೊಲೆ: ಮೂವರ ಬಂಧನ

ಕಳವಾಗಿದ್ದ 43 ಬೈಕ್‌ಗಳ ವಶ: ಮಾಲೀಕರಿಗೆ ಹಸ್ತಾಂತರ
Last Updated 12 ನವೆಂಬರ್ 2021, 4:53 IST
ಅಕ್ಷರ ಗಾತ್ರ

ಆನೇಕಲ್: ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿ ಬಳ್ಳೂರು ಕ್ರಾಸ್‌ ಬಳಿ ಈಚೆಗೆ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.

ತಾಲ್ಲೂಕಿನ ಜಿಗಣಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಕ್ಟೋಬರ್‌ 22ರಂದು ಮಾಯಸಂದ್ರ ಗ್ರಾಮದ ಭಾಸ್ಕರ್‌, ಅತ್ತಿಬೆಲೆ ದೀಪಕ್‌ ಎಂಬುವವರು ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯ ಬಳ್ಳೂರು ಕ್ರಾಸ್‌ ಬಳಿ ಕೊಲೆಯಾಗಿದ್ದರು. ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಾದ ತಮಿಳುನಾಡಿನ ಅರುಣ್‌ಕುಮಾರ್‌ (25), ಮಾರನಾಯಕನಹಳ್ಳಿ ಲಕ್ಷ್ಮೀನಾರಾಯಣ (21) ಮತ್ತು ರಾಚಮಾನಹಳ್ಳಿಯ ಸುಮನ್‌(21) ಬಂಧಿತರು.

ಆರೋಪಿ ಅರುಣ್‌ಕುಮಾರ್‌ ಫೈನಾನ್ಸ್‌ ವ್ಯವಹಾರ ಮಾಡುತ್ತಿದ್ದು ತಮಿಳುನಾಡಿನಲ್ಲಿ ಜೂಜಾಟ ಆಡುವವರಿಗೆ ಹಣ ಸಾಲವಾಗಿ ಕೊಡುತ್ತಿದ್ದ ಎನ್ನಲಾಗಿದೆ. ತಮಿಳುನಾಡಿನ ಬೇಗೆಪಲ್ಲಿ ದೊರೆ ಎಂಬುವವರಿಗೆ ಹಣ ಸಾಲ ನೀಡಿದ್ದ. ದೊರೆ, ದೀಪಕ್‌ ಮತ್ತು ಭಾಸ್ಕರ್‌ ಸ್ನೇಹಿತನಾಗಿದ್ದ. ಸಾಲದ ಹಣದ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವಂತೆ ಭಾಸ್ಕರ್‌ ಮತ್ತು ದೀಪಕ್‌ನನ್ನು ಅ.21ರಂದು ಅರುಣ್‌ಕುಮಾರ್‌ ಕರೆಯಿಸಿಕೊಂಡಿದ್ದಾನೆ. ಬಳ್ಳೂರು ಗ್ರಾಮದ ಖಾಲಿ ಜಮೀನೊಂದರ ಬಳಿ ಕರೆಯಿಸಿಕೊಂಡು ಸಂಧಾನ ಮಾಡುತ್ತಿದ್ದಾಗ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡು ಅರುಣ್‌ಕುಮಾರ್‌ ತನ್ನ ಸ್ನೇಹಿತರಾದ ಲಕ್ಷ್ಮೀನಾರಾಯಣ ಮತ್ತು ಸುಮನ್‌ ಜತೆಗೂಡಿ ಚಾಕುವಿನಿಂದ ದೀಪಕ್‌ ಮತ್ತು ಭಾಸ್ಕರ್‌ನ ಮೇಲೆ ಹಲ್ಲೆ ನಡೆಸಿ ತಲೆ ಮೇಲೆ ಸೈಜು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಕೊಲೆ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಲು ಡಿವೈಎಸ್ಪಿ ಎಂ.ಮಲ್ಲೇಶ್‌ ಮಾರ್ಗದರ್ಶನದಲ್ಲಿ ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌ ಮತ್ತು ಸಿಬ್ಬಂದಿ ನಾಗರಾಜು, ಅರುಣ್‌ಕುಮಾರ್, ಸುರೇಶ್‌ ಅವರ ತಂಡ ರಚಿಸಲಾಗಿತ್ತು.

ಆನೇಕಲ್‌ ಪೊಲೀಸ್‌ ಉಪವಿಭಾಗದ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡುತ್ತಿದ್ದ ತಮಿಳುನಾಡಿನ ಗುಡಿಯಾತ್ತಮ್‌ ತಾಲ್ಲೂಕಿನ ಕಾರಂಪಟ್ಟಿ ಶರತ್‌ಬಾಬು ಎಂಬ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿ ₹25 ಲಕ್ಷ ಮೌಲ್ಯದ 32 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಶರತ್‌ಬಾಬು ಮನೆಗಳ ಬಳಿ ಬೈಕ್‌ಗಳನ್ನು ಗಮನಿಸಿ ರಾತ್ರಿ ವೇಳೆಯಲ್ಲಿ ಕಳವು ಮಾಡಿ ನಂಬರ್‌ ಪ್ಲೇಟ್‌ ಬದಲಾಯಿಸಿ ಗುಡಿಯಾತ್ತಮ್‌, ವೆಲ್ಲೂರು ಮತ್ತಿತರ ಕಡೆ ಮಾರಾಟ ಮಾಡಿದ್ದ.

ಜಿಗಣಿ ಪೊಲೀಸ್‌ ಠಾಣೆಯಲ್ಲಿ 18 ಪ್ರಕರಣ, ಬನ್ನೇರುಘಟ್ಟ ಪೊಲೀಸ್‌ ಠಾಣೆ 3 ಪ್ರಕರಣಗಳು, ಆನೇಕಲ್‌ ಪೊಲೀಸ್‌ ಠಾಣೆಯ 1 ಪ್ರಕರಣ ಮತ್ತು ಇತರೆ ಪೊಲೀಸ್‌ ಠಾಣೆಗಳ 10 ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಗಣಿ ಇನ್‌ಸ್ಪೆಕ್ಟರ್‌ ಸುದರ್ಶನ್‌, ಸಬ್‌ಇನ್‌ಸ್ಪೆಕ್ಟರ್‌ ಶಿವಲಿಂಗ ನಾಯಕ ಮತ್ತು ಸಿಬ್ಬಂದಿ ರಾಜಣ್ಣ, ರಾಜು, ಮಹೇಶ್, ರಾಜೇಶ್, ಕೋಟೇಶ್, ಶಿವಪ್ರಸಾದ್, ಮೆಹಬ್ಬೂಬ್‌ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಬೈಕ್‌ ಮತ್ತು ಮೊಬೈಲ್‌ ಫೋನ್‌ ಕಳವು ಮಾಡುತ್ತಿದ್ದ ಆರೋಪಿಗಳಾದ ಅಜಯ್‌, ಮಂಜುನಾಥ್‌, ಶಿವಕುಮಾರ್‌ ಎಂಬುವವರನ್ನು ಬಂಧಿಸಿ ₹10ಲಕ್ಷ ಮೌಲ್ಯದ 11 ಮೋಟರ್‌ ಸೈಕಲ್‌ ಮತ್ತು 18 ಮೊಬೈಲ್‌ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆನೇಕಲ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಚ್‌.ಕೆ.ಮಹಾನಂದ್‌, ಬನ್ನೇರುಘಟ್ಟ ಸಬ್‌ಇನ್‌ಸ್ಪೆಕ್ಟರ್‌ ಅಂಜನ್‌ಕುಮಾರ್‌, ಸಿಬ್ಬಂದಿ ಹನುಮಂತಯ್ಯ, ಲೋಕೇಶ್‌, ರಘು ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಎಎಸ್ಪಿ ಲಕ್ಷ್ಮೀಗಣೇಶ್‌, ಡಿವೈಎಸ್ಪಿ ಎಂ.ಮಲ್ಲೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಕೆ.ವಿಶ್ವನಾಥ್‌, ಎಚ್.ಕೆ.ಮಹಾನಂದ್‌, ಸುದರ್ಶನ್‌, ಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT