ಬುಧವಾರ, ನವೆಂಬರ್ 20, 2019
27 °C

ಕೊಲೆಯತ್ನ: ಆರೋಪಿಯ ಕಾಲಿಗೆ ಗುಂಡು, ಬಂಧನ

Published:
Updated:
Prajavani

ದೊಡ್ಡಬಳ್ಳಾಪುರ: ಬಂಧಿಸಲು ಮುಂದಾದ ಪೊಲೀಸ್ ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ಇರಿದು ಕೊಲೆ ಯತ್ನ ಮಾಡಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ಬಂಧಿಸಿ, ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲಮಂಗಲ - ದೊಡ್ಡಬಳ್ಳಾಪುರ ರಸ್ತೆಯ ಆಲಹಳ್ಳಿ ಸಮೀಪ ಶನಿವಾರ ಮಧ್ಯರಾತ್ರಿ ಘಟನೆ ನಡೆದಿದೆ. ಶಿವಶಂಕರ್‌ ಬಂಧಿತ ಆರೋಪಿ. ದೊಡ್ಡಬಳ್ಳಾಪುರ ತಾಲ್ಲೂಕಿನ ಮಲ್ಲೋಹಳ್ಳಿ ಪಾಳ್ಯದ ಶಿವಶಂಕರ್‌ ಪ್ರಕರವೊಂದರಲ್ಲಿ ಕಾಡನೂರು ಪಾಳ್ಯದ ಚಂದ್ರ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ. ಶಿವಶಂಕರ್ ಕಾರೊಂದರಲ್ಲಿ ಸಂಚರಿಸುತ್ತಿದ್ದಾನೆ ಎಂಬ ಮಾಹಿತಿ ತಿಳಿದ ಗ್ರಾಮಾಂತರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಗಜೇಂದ್ರ ನೇತೃತ್ವದ ತಂಡ ಬಂಧಿಸಲು ತಂತ್ರ ರೂಪಿಸಿದ್ದರು.

ಈ ವೇಳೆ ಬಂಧಿಸಲು ಮುಂದಾದ ಹೆಡ್‌ ಕಾನ್‌ಸ್ಟೆಬಲ್ ರಾಧಾಕೃಷ್ಣ ಅವರ ಕೈಗೆ ಶಿವಶಂಕರ್‌ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಸಬ್‌ ಇನ್‌ಸ್ಪೆಕ್ಟರ್ ಗಜೇಂದ್ರ ಪಿಸ್ತೂಲ್‌ನಿಂದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿರುವ ರಾಧಾಕೃಷ್ಣ ಅವರಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬದಲಾದ ಪೊಲೀಸ್‌ ಕಾರ್ಯವೈಖರಿ: ಇಷ್ಟು ದಿನಗಳ ಕಾಲ ರೌಡಿ ಶೀಟರ್‌ಗಳನ್ನು ಕರೆಸಿ ಪರೇಡ್‌ ಮಾಡುವ ಮೂಲಕ ಎಚ್ಚರಿಕೆ ನೀಡಿ ಕಳುಹಿಸುತಿದ್ದರು. ಈಗ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಡಿವೈಎಸ್‌ಪಿ ಟಿ.ರಂಗಪ್ಪ ಅವರು ಪುಂಡರ ಮೇಲೆ ಗುಂಡು ಹಾರಿಸಿ ಬಂಧಿಸುವಂತೆ ಸೂಚನೆ ನೀಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ತಾಲ್ಲೂಕಿನ ನೆಲಮಂಗಲ ಗಡಿಗೆ ಹೊಂದಿಕೊಂಡಿರುವ ಮಧುರೆ ಹೋಬಳಿಯ ಮಲ್ಲೋಹಳ್ಳಿಪಾಳ್ಯ ಗ್ರಾಮದ ಶಿವಶಂಕರ್‌ ತನ್ನ ಎಲ್ಲ ರೀತಿಯ ವ್ಯವಹಾರ, ಸ್ನೇಹವನ್ನು ನೆಲಮಂಗಲದ ರೌಡಿಗಳೊಂದಿಗೆ ಹೊಂದಿದ್ದ. ಈ ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ತಾಲ್ಲೂಕಿನ ಮಧುರೆ ಹೋಬಳಿಯಲ್ಲಿ ಸಣ್ಣ ಪುಟ್ಟ ಸಂಗತಿಗಳಿಗೂ ತನ್ನ ಹಿಂಬಾಲಕರ ಮೂಲಕ ಹೆದರಿಸುವ ಕೆಲಸ ಮಾಡುತ್ತ ಹಲವು ಪ್ರಕರಣಗಳಲ್ಲಿ ಪರೋಕ್ಷವಾಗಿ ಭಾಗಿಯಾಗುತ್ತಿದ್ದ ಸ್ಥಳೀಯರು ತಿಳಿಸಿದರು.

ಅದರಲ್ಲೂ ಮಧುರೆ ಹೋಬಳಿ ಹಾಗೂ ಮಲ್ಲೋಹಳ್ಳಿ ಸಮೀಪದಲ್ಲೇ ಇರುವ ರೈ ತಾಂತ್ರಿಕ ವಿಶ್ವವಿದ್ಯಾಲಯದ ಸಮೀಪವೇ ತನ್ನ ಅಡ್ಡ ಮಾಡಿಕೊಂಡು ಹೊರ ರಾಜ್ಯದಿಂದ ಕಾಲೇಜಿಗೆ ಬಂದಿರುವ ಯುವಕ, ಯುವತಿಯರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದ. ಆದರೆ ಪೊಲೀಸರಿಗೆ ದೂರು ನೀಡಲು ಹೊರ ರಾಜ್ಯದವರು ಭಯಪಡುತಿದ್ದರು. ಇತ್ತೀಚೆಗೆ ಕಾಡನೂರುಪಾಳ್ಯ ಗ್ರಾಮದ ಚಂದ್ರ ಎಂಬಾತನ ಮೇಲೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಜಗಳ ಕೊಲೆ ಯತ್ನದವರೆಗೆ ಹೋಗಿತ್ತು. ಪೊಲೀಸರು ತಡವಾಗಿಯಾದರು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಮಧುರೆ ಹೋಬಳಿಯ ಸಾರ್ವಜನಿಕರು ತಿಳಿಸಿದರು.

ಪ್ರತಿಕ್ರಿಯಿಸಿ (+)