ಸೋಮವಾರ, ಮಾರ್ಚ್ 1, 2021
29 °C

ರೈತರ ಪಾಲಿಗೆ ಇದ್ದೂ ಇಲ್ಲದಂತಾದ ದೊಡ್ಡಬೆಳವಂಗಲ ನಾಡಕಚೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ತಾಲ್ಲೂಕಿನ ದೊಡ್ಡಬೆಳವಂಗಲ ನಾಡಕಚೇರಿಯಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ರೈತರು ಕಂದಾಯ ಇಲಾಖೆಯ ಯಾವುದೇ ದಾಖಲೆ ಪಡೆಯಬೇಕಾದರೂ ಪರದಾಡುವಂತಾಗಿದೆ ಎಂದು ರೈತರು ದೂರಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪ್ರಾಂತ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ, ರಾಮಚಂದ್ರಪ್ಪ, ರಮೇಶ್,ಗ್ರಾಮ ಪಂಚಾಯಿತಿ ಸದಸ್ಯ ಚನ್ನೇಗೌಡ, ವಾರದಲ್ಲಿ ಒಂದೆರೆಡು ದಿನ ಮಾತ್ರ ಇಲ್ಲಿನ ನಾಡ ಕಚೇರಿಯಲ್ಲಿನ ಕಂಪ್ಯೂಟರ್ ಗಳು ಕಾರ್ಯನಿರ್ವಹಿಸುತ್ತವೆ ಎಂದರು.

ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ‘ನೆಟ್ ವರ್ಕ್ ಸರಿ ಇಲ್ಲ’ ಎನ್ನುವ ಉತ್ತರ ನೀಡುತ್ತಾರೆ. ಆದರೆ, ಸರಿಪಡಿಸುವ ಕಡೆಗೆ ಮಾತ್ರ ಯಾರೂ ಗಮನ ಹರಿಸುತ್ತಿಲ್ಲ ಎಂದರು.

ನಾಡ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ತಾಲ್ಲೂಕಿನ ಇತರೆ ನಾಡ ಕಚೇರಿಗಳಲ್ಲಿ ಆಧಾರ್ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿನ ನಾಡಕಚೇರಿಯಲ್ಲಿ ಆಧಾರ್ ನೋಂದಣಿ ಸೇರಿದಂತೆ ಯಾವುದೇ ಸೇವೆ ಸೂಕ್ತ ಸಮಯದಲ್ಲಿ ರೈತರಿಗೆ ದೊರೆಯುತ್ತಿಲ್ಲ ಎಂದರು.

‘ಸಕಾಲ’ದಲ್ಲಿ ಯಾವುದೇ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಇಲ್ಲಿನ ಉಪತಹಶೀಲ್ದಾರ್ ಸಾಸಲು ಹೋಬಳಿ, ದೊಡ್ಡಬೆಳವಂಗಲ ಹೋಬಳಿ ಎರಡೂ ಕಡೆಗೂ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ರಾಜಸ್ವ ನಿರೀಕ್ಷಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಮೂರು ಹುದ್ದೆಗಳನ್ನು ಒಬ್ಬರೇ ನಿರ್ವಹಿಸುತ್ತಿರುವುದರಿಂದ ಕಂದಾಯ ಇಲಾಖೆ ಕೆಲಸಗಳು ವಿಳಂಬವಾಗುತ್ತಿವೆ. ಗ್ರಾಮ ಲೆಕ್ಕಾಧಿಕಾರಿಗಳ ಕೆಲಸವನ್ನು ಗ್ರಾಮ ಸಹಾಯಕರು ನಿರ್ವಹಿಸುವಂತಾಗಿದೆ ಎಂದರು.

ಕಂದಾಯ ಅದಾಲತ್‌ನಲ್ಲಿ ಇಲಾಖೆ ವತಿಯಿಂದ ಯಾವ ರೀತಿಯ ಸೇವೆ ನೀಡಲಾಗುತ್ತಿದೆ ಎನ್ನುವ ಬಗ್ಗೆ ಕರಪತ್ರ ಮುದ್ರಿಸಿ ಹಂಚಿಕೆ ಮಾಡಿದ್ದಾರೆ. ಆದರೆ, ವಾಸ್ತವದಲ್ಲಿ ಪಂಚಾಯಿತಿ ಪಾರಿಕತ್, ವಿಭಾಗ ಪತ್ರಗಳಂತೆ ಪಹಣಿ ತಿದ್ದುಪಡಿ ಮಾಡುತ್ತಿಲ್ಲ ಎಂದು ದೂರಿದರು.

ನೆಟ್ ವರ್ಕ್ ಸಮಸ್ಯೆ ನಾಡಕಚೇರಿಗಷ್ಟೇ ಸೀಮಿತವಾಗಿಲ್ಲ. ದೊಡ್ಡಬೆಳವಂಗಲದಲ್ಲಿನ ಬ್ಯಾಂಕ್‌ಗಳಲ್ಲೂ ಸಹ ಸೂಕ್ತವಾಗಿ ಸೇವೆ ದೊರೆತ್ತಿಲ್ಲ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.