ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವ ಬೆಂಗಳೂರು’ ಹೆಸರಿಡಿ: ಅಭಿಯಾನದ ಮುಖಂಡ ಜಿ.ಎನ್.ಪ್ರದೀಪ್

ಗ್ರಾಮಾಂತರ ಜಿಲ್ಲಾ ಕೇಂದ್ರದ ಘೋಷಣೆಗೆ ವಿವಿಧ ಸಂಘಟನೆಗಳ ಅಭಿಯಾನ ಆರಂಭ
Last Updated 19 ಫೆಬ್ರುವರಿ 2021, 6:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದ ಘೋಷಣೆಗೆ ಒತ್ತಡ ಆರಂಭವಾಗುತ್ತಿರುವಂತೆ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ನಡುವೆ ಕದನ ಪ್ರಾರಂಭವಾಗಿದೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಸಿಲಿಕಾನ್ ಸಿಟಿ ಪರ್ಯಾಯ ನಗರವಾಗಿ 'ನವ ಬೆಂಗಳೂರು ಯೋಜನೆ'ಯಡಿ ಅಭಿವೃದ್ಧಿ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರಿಂದ ಅಭಿಯಾನ ಆರಂಭವಾಗಿದೆ.

ಈ ಬಗ್ಗೆ ಮಾತನಾಡಿದ ಅಭಿಯಾನದ ಮುಖಂಡ ಜಿ.ಎನ್.ಪ್ರದೀಪ್, ಜಿಲ್ಲಾಕೇಂದ್ರ ಮಾಡುವುದು ಅಭಿವೃದ್ಧಿ ದೃಷ್ಟಿಯಿಂದ. ಹೀಗಾಗಿ ನಮ್ಮ ಜಿಲ್ಲೆಯ ಯಾವುದೇ ತಾಲ್ಲೂಕಿಗೆ ತಾರತಮ್ಯ ಮಾಡದೆ ಇಡೀ ಜಿಲ್ಲೆಯನ್ನು ’ನವ ಬೆಂಗಳೂರು’ ಎಂದು ಘೋಷಣೆ ಮಾಡಬೇಕು. ಇದರಿಂದ ಯಾವುದೇ ತಾಲ್ಲೂಕಿಗೆ ಅನ್ಯಾಯವಾಗುವುದಿಲ್ಲ. 'ನವ ಬೆಂಗಳೂರು' ಸಾಕಾರವಾದರೆ ಭವಿಷ್ಯದಲ್ಲಿ ನಮ್ಮ ಜಿಲ್ಲೆ, ತಾಲ್ಲೂಕಿಗೆ ದೇಶ-ವಿದೇಶಗಳಿಂದ ಬೃಹತ್ ಕೈಗಾರಿಕೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣ ಹರಿದು ಬರಲಿದೆ. ಈಗಾಗಲೇ ಹಲವು ಕೈಗಾರಿಕಾ ಪ್ರದೇಶಗಳು ಇವೆ. ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ಬೆಂಗಳೂರಿಗೆ ಪರ್ಯಾಯವಾಗಿ ಮತ್ತೊಂದು ಐಟಿ ನಗರ ತಲೆ ಎತ್ತಲಿದೆ. ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಲಭಿಸಲಿದೆ. ಇದರ ಜತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡ ಸಾರಥಿ ಸತ್ಯಪ್ರಕಾಶ್ ಮಾತನಾಡಿ, ನಾಲ್ಕು ತಾಲ್ಲೂಕುಗಳು ಬೆಂಗಳೂರು ಪಕ್ಕದಲ್ಲೇ ಇದ್ದರೂ ಅಭಿವೃದ್ಧಿಯಲ್ಲಿ ಮಾತ್ರ ದೂರವೇ ಉಳಿದಿದೆ. ನವ ಬೆಂಗಳೂರು ಯೋಜನೆಯಡಿ ಅಭಿವೃದ್ಧಿಪಡಿಸಲು ಗ್ರಾಮಾಂತರ ಜಿಲ್ಲೆ ಅರ್ಹತೆ ಹೊಂದಿದೆ. ಜಿಲ್ಲಾ ಕೇಂದ್ರದ ಕುರಿತು ಎಲ್ಲ ತಾಲ್ಲೂಕುಗಳ ಅಂಶಗಳನ್ನು ಪರಿಗಣಿಸಿ ಘೋಷಣೆ ಮಾಡಬೇಕಿದೆ. ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ರೀಡಾಂಗಣ, ಕೈಗಾರಿಕಾ ಪ್ರದೇಶ, ಭೌಗೋಳಿಕ, ಶೈಕ್ಷಣಿಕ, ಸರ್ಕಾರಕ್ಕೆ ಹೆಚ್ಚು ಆದಾಯ ಸಂಗ್ರಹ ಮಾಡುವ ನಗರವಾಗಿದ್ದು ಎಲ್ಲಾ ಅಂಶಗಳನ್ನು ಸರ್ಕಾರ ಪರಿಗಣಿಸಬೇಕಿದೆ ಎಂದರು.

ಸಭೆಯಲ್ಲಿ ಅರವಿಂದ, ರಮೇಶ್,ಮಂಜುನಾಥ,ರುದ್ರಾರಾಧ್ಯ,ಹರ್ಷ ಸೇರಿದಂತೆ ದಲಿತ, ಕನ್ನಡಪರ ಹಾಗೂ ರೈತ ಪರ ಸಂಘಟನೆ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT