ಸೋಮವಾರ, ಸೆಪ್ಟೆಂಬರ್ 27, 2021
22 °C
₹2 ಲಕ್ಷ 17ಸಾವಿರ ವೆಚ್ಚದಲ್ಲಿ ಕಾಮಗಾರಿ

ಚಿಕ್ಕತತ್ತಮಂಗಲ ಗ್ರಾಮದಲ್ಲಿ ನರೇಗಾ ಅಡಿ ಕಳಪೆ ಕಾಮಗಾರಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಲ್ಲಿ ಬಳಕೆಯಾದ ಚಪ್ಪಡಿಕಲ್ಲುಗಳನ್ನೇ ಮರು ಬಳಕೆ ಮಾಡಲಾಗುತ್ತಿದೆ. ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಬಿಜೆಪಿ ಮುಖಂಡ ಮಾಚಪ್ಪ ಆರೋಪಿಸಿದರು.

ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತತ್ತಮಂಗಲ ಗ್ರಾಮದಲ್ಲಿ ₹2 ಲಕ್ಷ 17 ಸಾವಿರ ವೆಚ್ಚದಲ್ಲಿ ನೀರು ಕಾಲುವೆ ಕಾಮಗಾರಿ ಆರಂಭವಾಗಿದೆ. ಕಲ್ಲು ಚಪ್ಪಡಿಗಳಿಂದ ನಿರ್ಮಾಣ ಮಾಡಿದ್ದ ಚರಂಡಿ ಕಿತ್ತುಹಾಕಲಾಗಿದೆ. ಚಪ್ಪಡಿಗಳನ್ನು ಹರಾಜು ಮಾಡಬೇಕಾಗಿತ್ತು. ಇಲ್ಲವೇ ಸ್ಥಳೀಯರಿಗೆ ಕೊಡಬೇಕಾಗಿತ್ತು. ಆದರೆ, ಅದೇ ಚಪ್ಪಡಿಗಳನ್ನು ಹೊಡೆದು ಕಟ್ಟಡದ ಕಲ್ಲುಗಳನ್ನಾಗಿ ಮಾಡಿಕೊಂಡು ಕಾಮಗಾರಿ ಮಾಡುತ್ತಿದ್ದಾರೆ ಎಂದರು.

ಚರಂಡಿಯ ಪಕ್ಕದಲ್ಲೇ ನೀರಿನ ಪೈಪು ಅಳವಡಿಸಲಾಗಿದೆ. ಸರ್ಕಾರಿ ನಿಯಮದ ಪ್ರಕಾರ ನೀರಿನ ಪೈಪ್‌ಗಳು ಭೂಮಿಯೊಳಗೆ 2 ರಿಂದ 2.6 ಅಡಿಗಳ ಆಳಕ್ಕೆ ಅಳವಡಿಸಬೇಕು. ಇಲ್ಲವಾದರೆ ಪೈಪ್‌ಗಳು ಪದೇ ಪದೇ ಒಡೆದುಹೋಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುವ ಸಾಧ್ಯತೆ ಇದೆ. ಇಲ್ಲಿ ಅಳವಡಿಸಿರುವ ಪೈಪ್‌ಲೈನ್ ಕೇವಲ 4 ಇಂಚಿನಷ್ಟು ಒಳಗೆ ಅಳವಡಿಸಿದ್ದಾರೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಪ್ಪ ಮಾತನಾಡಿ, ಚಪ್ಪಡಿ ಕಲ್ಲುಗಳನ್ನು ಕಾಮಗಾರಿಗೆ ಬಳಕೆ ಮಾಡುತ್ತಿಲ್ಲ. ಚರಂಡಿ ಕಾಮಗಾರಿ ಮಾಡುವ ಜಾಗದಲ್ಲಿ ಶೌಚಾಲಯ ಗುಂಡಿ ಮಾದರಿಯ ದೊಡ್ಡಹಳ್ಳ ಸಿಕ್ಕಿದೆ. ಅದನ್ನು ಕಲ್ಲುಗಳಿಂದ ಮುಚ್ಚಿ, ಅದರ ಮೇಲೆ ಸಿಮೆಂಟ್ ಕಾಂಕ್ರಿಟ್ ಹಾಕಿದ ನಂತರ ಚರಂಡಿ ಗೋಡೆ ಕಟ್ಟಲಾಗುವುದು. ಈ ಬಗ್ಗೆ ಎಂಜಿನಿಯರ್ ಅವರ ಸಲಹೆ ಪಡೆದು ಕೆಲಸ ಮಾಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಚಿಕ್ಕತತ್ತಮಂಗಲ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ಆಗಿರಲಿಲ್ಲ. ಚರಂಡಿಯಲ್ಲಿ ನೀರು ಹರಿಯಲು ಸಮಸ್ಯೆಯಾಗಿದ್ದರಿಂದ ಕಾಮಗಾರಿ ಮಾಡಲಾಗಿದೆ. ಪಿಡಿಒ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ನಿಯಮಾನುಸಾರ ಕೆಲಸ ಮಾಡಲಾಗುತ್ತಿದೆ. ಕಾಮಗಾರಿ ಕಳಪೆಯಾಗಿ ಕಂಡು ಬಂದಿಲ್ಲ ಎಂದರು.

ಕಳಪೆ ಆಗಿದ್ದರೆ ಕ್ರಮ: ಕಾಮಗಾರಿ ಜಾಗ ಪರಿಶೀಲನೆ ಮಾಡಲಾಗಿದೆ. ಎಂಜಿನಿಯರ್ ಕ್ರಿಯಾಯೋಜನೆ ತಯಾರಿಸಿ ಕೆಲಸ ಮಾಡಲು ಅನುಮತಿ ನೀಡಿದ್ದಾರೆ. ಕಾರ್ಯಾದೇಶದ ಪ್ರಕಾರ ಕೆಲಸ ನಡೆಯುತ್ತಿದೆ. ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಕಳಪೆಯಾಗಿದ್ದರೆ ಮುಂದಿನ ಕ್ರಮ ಜರುಗಿಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು