ಶನಿವಾರ, ಸೆಪ್ಟೆಂಬರ್ 18, 2021
21 °C

‘ನರೇಗಾ’ಕ್ಕೆ ಸಕಾರಾತ್ಮಕ ಆಲೋಚನೆ ಮುಖ್ಯ: ಜಿ.ಪಂ.ಸಿಇಒ ಆರ್.ಲತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾಹಿತಿ ಕೊರತೆಯಿಂದಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಕಾಮಗಾರಿಗಳು ಹೆಚ್ಚಾಗಿ ನಡೆದಿಲ್ಲ. ಈ ಕೊರತೆಯನ್ನು ನೀಗಿಸುವ ಸಲುವಾಗಿಯೇ ಅರಿವು ಕಾರ್ಯಗಾರ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಲತಾ ಹೇಳಿದರು.

ಅವರು ನಗರದ ಬಾಬು ಜಗಜೀವನ್ ರಾಮ್ ಭವನದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ನರೇಗಾ ಅನುಷ್ಠಾನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನ ಪ್ರತಿನಿಧಿಗಳ ಪಾತ್ರವು ಮುಖ್ಯ.ಗ್ರಾಮಾಂತರ ಜಿಲ್ಲೆಯಲ್ಲಿ 2017ನೇ ಸಾಲಿನಲ್ಲಿ ಕೇವಲ 45 ಕೋಟಿಯನ್ನು ನರೇಗಾದಲ್ಲಿ ಬಳಸಿಕೊಳ್ಳಲಾಗಿದೆ. ದನದ ಕೊಟ್ಟಿಗೆ, ಚೆಕ್ ಡ್ಯಾಂ, ರೈತರು ತೋಟಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವಾರು ವೈಯಕ್ತಿಕ ಕೆಲಸಗಳನ್ನು ನರೇಗಾ ಯೋಜನೆಯಡಿಯಲ್ಲಿ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದರು.

ಜಿಲ್ಲೆಯಲ್ಲಿ 70 ಸಾವಿರ ಜಾಬ್ ಕಾರ್ಡ್ ಗಳು ನೊಂದಣಿಯಾಗಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜಾಬ್ ಕಾರ್ಡ್ ಗಳನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4,500 ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿಕೊಳ್ಳಲು ಅವಕಾಶ ಇದೆ. ಆದರೆ ವಾಸ್ತವದಲ್ಲಿ ಕೇವಲ 45 ಕೋಟಿ ಖರ್ಚಾಗಿದೆ ಎಂದರು.

ಈಗಾಗಲೇ ಸರ್ವೇ ನಡೆಸಿರುವ ಅಂಕಿ ಅಂಶಗಳ ಪ್ರಕಾರ 25 ಸಾವಿರ ಜನ ರೈತರಿಗೆ ದನದ ಕೊಟ್ಟಿಗೆ ಇಲ್ಲ. ಎರಡು ಸಾವಿರ ಜನ ರೈತರಿಗೆ ಕೊಟ್ಟಿಗೆಗಳನ್ನು ನಿರ್ಮಿಸಿಕೊಳ್ಳಲು ಸ್ಥಳದ ಕೊರತೆ ಇದೆ. ಅಕ್ಟೋಬರ್ ಅಂತ್ಯದ ವೇಳೆಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 50 ದನದ ಕೊಟ್ಟಿಗಳನ್ನು ನಿರ್ಮಿಸಲು ಗುರಿ ನೀಡಲಾಗಿದೆ. ಡಿಸೆಂಬರ್ ವೇಳೆಗೆ ಸಂಪೂರ್ಣ ಗುರಿಯನ್ನು ಪೂರೈಸಬೇಕು. ಕೊಟ್ಟಿಗೆ ನಿರ್ಮಿಸಲು ಸ್ಥಳ ಇಲ್ಲದ 2,000 ಜನ ರೈತರಿಗೆ ಗ್ರಾಮಗಳಲ್ಲಿ ಸಾಮೂಹಿಕ ಕೊಟ್ಟಿಗೆಗಳನ್ನು ನಿರ್ಮಿಸುವ ಚಿಂತನೆಯನ್ನು ನಡೆಸಲಾಗಿದೆ ಎಂದರು.

ರಾಮನಗರ ಜಿಲ್ಲೆಯಲ್ಲಿ900 ಕೋಟಿ ನರೇಗಾದಲ್ಲಿ ಖರ್ಚು ಮಾಡಿ ಕಾಮಗಾರಿಗಳನ್ನು ಮಾಡಿಸಲಾಗಿದೆ. ಇದರಿಂದಾಗಿ ರಾಮನಗರ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ, ಹಾಲಿನ ಉತ್ಪಾದನೆಯಲ್ಲೂ ಶೇ 11ರಷ್ಟು ಹೆಚ್ಚುವರಿಯಾಗಿದೆ. ರಾಮನಗರ ಜಿಲ್ಲೆಗೆ ನರೇಗಾದಲ್ಲಿನ ಸಾಧನೆಗಾಗಿ ರಾಷ್ಟ್ರೀಯ ಪುರಸ್ಕಾರವು ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ನರೇಗಾ ಯಶಸ್ವಿಗೆ ಜನರ ಹಾಗೂ ಅಧಿಕಾರಿಗಳಲ್ಲಿ ಉತ್ಸಾಹ ಮುಖ್ಯ. ನರೇಗಾದಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಾಗ ರಾಜಕಾರಣ ಮಾಡದೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ಅನುದಾನ ಇಲ್ಲದೆಯು ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ ಎಂದರು.

ಕ್ರಮ ಕೈಗೊಳ್ಳಿ: ತಾಲ್ಲೂಕಿನಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಸದೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯರಿಗೆ ನೀಡಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಅವಕಾಶ ನೀಡಬೇಕು. ಇದಲ್ಲದೆ ಗ್ರಾಮೀಣ ನೀರು ಸರಬರಾಜು ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಶುದ್ಧಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿ ವರ್ಷಗಳೆ ಕಳೆದಿದ್ದರೂ ಜನರ ಸೇವೆಗೆ ಲಭಿಸಿಲ್ಲ. ಇವುಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಅವರು ಹೇಳಿದರು.

ನರೇಗಾ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಕೊಡಗು ನೆರೆ ಸಂತ್ರಸ್ತರ ನಿಧಿಗೆ ಗ್ರಾಮ ಪಂಚಾಯಿತಿಗಳ ವತಿಯಿಂದ ₹2 ಲಕ್ಷಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಚುಂಚೇಗೌಡ, ಎಚ್.ಅಪ್ಪಯ್ಯ, ಪದ್ಮಾವತಿ ಬಿ.ಮುನೇಗೌಡ, ಅರುಣಾಆನಂದ್, ಜಯಮ್ಮ, ಕನ್ಯಾಕುಮಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿಕೆಂಪಣ್ಣ, ಪಶುಸಂಗೋಪನ ಇಲಾಖೆ ಜಿಲ್ಲಾ ಉಪನಿರ್ದೇಶಕ ಗೋವಿಂದರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಎಚ್.ಎಂ.ದ್ಯಾಮಪ್ಪ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯನಿರ್ವಹಕ ಅಧಿಕಾರಿಗಳು ಹಾಜರಿದ್ದರು.

ಅಂಕಿ ಅಂಶಗಳು

* ಜಿಲ್ಲೆಯಲ್ಲಿ ಒಟ್ಟು ದನದ ಕೊಟ್ಟಿಗೆ 25 ಸಾವಿರ

* 2018ನೇ ಸಾಲಿಗೆ ₹150 ಕೋಟಿ ಕಾಮಗಾರಿ ಗುರಿ

* 2017ನೇ ಸಾಲಿನಲ್ಲಿ ₹45 ಕೋಟಿ ಬಳಕೆ

* ದನದ ಕೊಟ್ಟಿಗೆ ನಿರ್ಮಿಸಲು 2 ಸಾವಿರ ರೈತರಿಗೆ ಸ್ಥಳ ಇಲ್ಲ

* ₹4,500 ಕೋಟಿ ಬಳಕೆಗೆ ಅವಕಾಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು