ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗೆ ನರೇಂದ್ರ ಮೋದಿ ಅಲೆ ಕಾರಣ: ಸಂಸದ ಬಚ್ಚೇಗೌಡ ಹೇಳಿಕೆ

Last Updated 3 ಜೂನ್ 2019, 13:49 IST
ಅಕ್ಷರ ಗಾತ್ರ

ವಿಜಯಪುರ: ‘ದೇಶದಲ್ಲಿ ಮೋದಿ ಅಲೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದ ಅನುಕಂಪ ಹಾಗೂ ಹಿಂದಿನ ಸಂಸದರ ಅಭಿವೃದ್ಧಿ ಶೂನ್ಯ ಸಂಪಾದನೆಯಿಂದ ನಾನು ಸಂಸದನಾಗಿ ಆಯ್ಕೆಯಾಗಿದ್ದೇನೆ’ ಎಂದು ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದರು.

ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿದ ನಂತರ ಮತದಾರರಿಗೆ ಕೃತಜ್ಞತೆ ಹೇಳಿ ಅವರು ಮಾತನಾಡಿದರು.

‘ದೇಶದಲ್ಲಿ ಈ ಬಾರಿಯೂ ಮೋದಿ ಅಲೆಯಿತ್ತು. ಕಾರ್ಯಕರ್ತರು ಉತ್ತಮವಾಗಿ ಸಂಘಟನೆ ಮಾಡಿದರು, ಜನರು ಯಾವುದೇ ಟೀಕೆ ಟಿಪ್ಪಣಿಗಳಿಗೆ ಬೆಲೆ ಕೊಡದೆ ಕ್ಷೇತ್ರದ ಅಭಿವೃದ್ಧಿಗಾಗಿ ಬಚ್ಚೇಗೌಡ ಶ್ರಮಿಸುತ್ತಾರೆ ಎನ್ನುವ ನಂಬಿಕೆಯಿಂದ ಕ್ಷೇತ್ರದಲ್ಲಿನ ಎಲ್ಲಾ ತಾಲ್ಲೂಕುಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ಕೊಟ್ಟಿದ್ದಾರೆ’ ಎಂದರು.

‘ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ 1.92 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವುದು ಇದೇ ಮೊದಲು. ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸಲು ನಾನು ಬದ್ಧನಾಗಿದ್ದೇನೆ. ಈ ಭಾಗಕ್ಕೆ ನೀರು ತಂದೇ ತರುತ್ತೇನೆ’ ಎಂದರು.

‘ಚಿಕ್ಕಬಳ್ಳಾಪುರದಲ್ಲಿ ಕೆ.ಡಿ.ಪಿ. ಸಭೆಯನ್ನು ಕರೆಯಲಾಗಿದೆ. ಅಲ್ಲಿ ನೀರಾವರಿ ತಜ್ಞರು, ಅಧಿಕಾರಿಗಳು ಸೇರಿದಂತೆ ಎಲ್ಲರಿಂದಲೂ ಅಂಕಿ ಅಂಶಗಳ ಸಮೇತ ಮಾಹಿತಿಯನ್ನು ಪಡೆದುಕೊಂಡು ಈ ಬಗ್ಗೆ ಚರ್ಚೆ ಮಾಡುವೆ’ ಎಂದರು.

ವಿಜಯಪುರದಲ್ಲಿ 55 ಕೊಳವೆಬಾವಿಗಳು ಬತ್ತಿಹೋಗಿವೆ. ಇರುವ ಕೊಳವೆಬಾವಿಗಳಿಂದ ನೀರನ್ನು ಸಂಪುಗಳಿಗೆ ಹಾಯಿಸಿಕೊಂಡು ಪೂರೈಕೆ ಮಾಡುವ ಕೆಲಸ ನಡೆಯುತ್ತಿದೆ. ಈಗೆಲ್ಲ ಆನ್‌ಲೈನ್ ವ್ಯವಸ್ಥೆ ಆಗಿದೆ. ಆದರೂ ಜನ ಬಿಲ್‌ ಕಟ್ಟುತ್ತಿಲ್ಲ. ಆದ್ದರಿಂದ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಬೀದಿದೀಪಗಳ ನಿರ್ವಹಣೆಗೂ ಹಣವನ್ನು ಪೂರೈಕೆ ಮಾಡದೇ ಇರುವ ಕಾರಣದಿಂದಾಗಿ ಅವು ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದರು.

ನೀರಿನ ಹಂಚಿಕೆ ಸರಿಯಾಗಿ ಆಗುತ್ತಿಲ್ಲ. 8 ವಾರ್ಡ್‌ಗಳಿಗೆ ಮಾತ್ರವೇ ಹೆಚ್ಚಿನ ನೀರು ಪೂರೈಕೆ ಮಾಡುವ ಕಡೆಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಎನ್ನುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

‘ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ. ಜನರ ವಿಶ್ವಾಸ ಗಳಿಸಿಕೊಂಡು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ’ ಎಂದರು.

ಮುಖಂಡ ಬಲಮುರಿ ಶ್ರೀನಿವಾಸ್ ಮಾತನಾಡಿ, ‘ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಗೆ ಅವಕಾಶವಿದ್ದರೂ ಪುರಸಭೆಯಲ್ಲಿ ನಕಲಿ ಬಿಲ್‌ ಪುಸ್ತಕ ತಯಾರಿಸಿಕೊಂಡು ಜನರಿಗೆ ನಕಲಿ ರಸೀದಿಗಳನ್ನು ನೀಡುತ್ತಿದ್ದಾರೆ. ವೃದ್ಧರು ತೆರಿಗೆ ಕಟ್ಟಲಿಕ್ಕೆ ಹೋದರೆ ಸ್ವೀಕರಿಸಲ್ಲ’ ಎಂದು ದೂರಿದರು.

ಸ್ಥಳೀಯರ ಆರೋಪಗಳಿಗೆ ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು. ಹಂತ ಹಂತವಾಗಿ ಸರಿಪಡಿಸುವ ಕೆಲಸ ಮಾಡಿದ್ದೇವೆ. ವಿದ್ಯುತ್ ದೀಪಗಳ ನಿರ್ವಹಣೆಗೆ ಗುತ್ತಿಗೆದಾರರಿಗೆ ಟೆಂಡರ್ ಆಗಿತ್ತು. ಅವರ ಟೆಂಡರ್ ಅವಧಿ ಮುಗಿದಿದ್ದು ಪುನಃ ಟೆಂಡರ್ ಕರೆಯಬೇಕಾಗಿದೆ. ಅದು ಜಿಲ್ಲಾಧಿಕಾರಿಗಳ ಹಂತದಲ್ಲಿದೆ. ಮೊದಲಿದ್ದ ಗುತ್ತಿಗೆದಾರರು ಹಣವನ್ನು ಕೊಡಬೇಕು. ನಮಗೆ ಆದಾಯ ಹೆಚ್ಚಾಗಿ ಬರುತ್ತಿಲ್ಲ. ಉಳಿದಂತೆ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೂ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ವಿಜಯಪುರವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎನ್ನುವ ಒತ್ತಾಯಕ್ಕೆ ಉತ್ತರಿಸಿದ ಬಚ್ಚೇಗೌಡ ಅವರು, ‘ಕಂದಾಯ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ. ಈಗಾಗಲೇ ಕೆಲವು ತಾಲ್ಲೂಕುಗಳನ್ನು ರಚನೆ ಮಾಡಿದ್ದಾರೆ. ಯಾವ ಮಾನದಂಡದ ಮೇಲೆ ಮಾಡಿದ್ದಾರೆ ಎನ್ನುವ ಬಗ್ಗೆ ತಿಳಿದುಕೊಂಡು ತಾಲ್ಲೂಕು ಕೇಂದ್ರ ಮಾಡಿಸಲಿಕ್ಕೆ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ, ನಗರ ಘಟಕದ ಅಧ್ಯಕ್ಷ ಚ. ವಿಜಯಬಾಬು, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮುಖಂಡ ಕನಕರಾಜು, ಡಿ.ಎಂ. ಮುನೀಂದ್ರ, ಗಿರೀಶ್, ಗಡ್ಡದನಾಯಕನಹಳ್ಳಿ ಚಂದ್ರಪ್ಪ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT